ಮಧ್ವನಾಮ ಹರಿದಾಸ ಸಾಹಿತ್ಯದ ಅತಿ ಜನಪ್ರಿಯ ಕೀರ್ತನೆಗಳಲ್ಲಿ ಒಂದು. ಇದನ್ನು ರಚಿಸಿದವರು ಹದಿನೈದನೇ ಶತಮಾನದಲ್ಲಿ ಮುಳಬಾಗಿಲಿನಲ್ಲಿದ್ದ ಶ್ರೀಪಾದರಾಜರು, ಅವರ ಅಂಕಿತ ರಂಗವಿಠಲ. ಮುಖ್ಯಪ್ರಾಣನಾದ ವಾಯುದೇವರ ಮಹಿಮೆಯನ್ನೂ ಅವರ ಮೂರು ಅವತಾರಗಳಾದ ಹನುಮಂತ, ಭೀಮ, ಮಧ್ವಾಚಾರ್ಯರ ಕಥೆಯನ್ನೂ ಇದು ಹಾಡುತ್ತದೆ.
Madhvanama is one of the best loved songs of the Haridasa tradition. It was composed by Sripadaraja, who lived at Mulbagal in the fifteenth century and signed his songs Rangavittala. It sings the greatness of Vayu, the chief life breath, and the stories of his three avataras: Hanuman, Bhima and Madhvacharya.
ಇದೊಂದು ಕನ್ನಡ ಕೃತಿ, ಸಂಸ್ಕೃತ ಸ್ತೋತ್ರವಲ್ಲ. ಆದ್ದರಿಂದ ಇಲ್ಲಿ ಹಳಗನ್ನಡದ ನುಡಿಗಳಿಗೆ ಇಂದಿನ ಕನ್ನಡದ ಗದ್ಯರೂಪದ ಅರ್ಥವನ್ನು ಕೊಟ್ಟಿದ್ದೇವೆ. ಕೊನೆಯ ಮೂರು ನುಡಿಗಳು ನಂತರದ ಕಾಲದ ಜಗನ್ನಾಥದಾಸರು ಸೇರಿಸಿದ ಫಲಶ್ರುತಿ.
This is a Kannada composition, and so we give a modern Kannada prose rendering of its old Kannada verses. The last three verses are a phalashruti added by the later poet Jagannathadasa.
ಪಾಠ (ಕನ್ನಡ)
ಪಲ್ಲವಿ
ಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣ
ಅಖಿಳಗುಣ ಸದ್ಧಾಮ ಮಧ್ವನಾಮ
ವಾಯುದೇವರ ಮಹಿಮೆ
ಆವ ಕಚ್ಛಪ ರೂಪದಿಂದಲಂಡೋದಕವ
ಓವಿ ಧರಿಸಿದ ಶೇಷಮೂರುತಿಯನು
ಆವವನ ಬಳಿವಿಡಿದು ಹರಿಯ ಸುರರೈದುವರು
ಆ ವಾಯು ನಮ್ಮ ಕುಲಗುರುರಾಯನು ॥ 1 ॥
ಆವವನು ದೇಹದೊಳಗಿರಲು ಹರಿ ನೆಲಸಿಹನು
ಆವವನು ತೊಲಗೆ ಹರಿ ತಾ ತೊಲಗುವ
ಆವವನು ದೇಹದ ಒಳಹೊರಗೆ ನಿಯಾಮಕನು
ಆ ವಾಯು ನಮ್ಮ ಕುಲಗುರುರಾಯನು ॥ 2 ॥
ಕರಣಾಭಿಮಾನಿ ಸುರರು ದೇಹವ ಬಿಡಲು
ಕುರುಡ ಕಿವುಡ ಮೂಕನೆಂದೆನಿಸುವ
ಪರಮ ಮುಖ್ಯಪ್ರಾಣ ತೊಲಗಲಾ ದೇಹವನು
ಅರಿತು ಪೆಣನೆಂದು ಪೇಳುವರು ಬುಧಜನ ॥ 3 ॥
ಸುರರೊಳಗೆ ನರರೊಳಗೆ ಸರ್ವಭೂತಗಳೊಳಗೆ
ಪರತರನೆನಿಸಿ ನಿಯಾಮಿಸಿ ನೆಲಸಿಹ
ಹರಿಯನಲ್ಲದೆ ಬಗೆಯ ಅನ್ಯರನು ಲೋಕದೊಳು
ಗುರುಕುಲತಿಲಕ ಮುಖ್ಯ ಪವಮಾನನು ॥ 4 ॥
ಹನುಮಾವತಾರ
ತ್ರೇತೆಯಲಿ ರಘುಪತಿಯ ಸೇವೆ ಮಾಡುವೆನೆಂದು
ವಾತಸುತ ಹನುಮಂತನೆಂದೆನಿಸಿದ
ಪೋತಭಾವದಿ ತರಣಿಬಿಂಬಕ್ಕೆ ಲಂಘಿಸಿದ
ಈತಗೆಣೆಯಾರು ಮೂರ್ಲೋಕದೊಳಗೆ ॥ 5 ॥
ತರಣಿಗಭಿಮುಖನಾಗಿ ಶಬ್ದಶಾಸ್ತ್ರವ ಪಠಿಸಿ
ಉರವಣಿಸಿ ಹಿಂದುಮುಂದಾಗಿ ನಡೆದ
ಪರಮ ಪವಮಾನಸುತ ಉದಯಾಸ್ತಶೈಲಗಳ
ಭರದಿ ಐದಿದ ಈತಗುಪಮೆ ಉಂಟೆ ॥ 6 ॥
ಅಖಿಳ ವೇದಗಳ ಸಾರ ಪಠಿಸಿದನು ಮುನ್ನಲ್ಲಿ
ನಿಖಿಳ ವ್ಯಾಕರಣಗಳ ಇವ ಪೇಳಿದ
ಮುಖದಲ್ಲಿ ಕಿಂಚಿದಪಶಬ್ದ ಇವಗಿಲ್ಲೆಂದು
ಮುಖ್ಯಪ್ರಾಣನನು ರಾಮನನುಕರಿಸಿದ ॥ 7 ॥
ತರಣಿಸುತನನು ಕಾಯ್ದು ಶರಧಿಯನು ನೆರೆದಾಟಿ
ಧರಣಿಸುತೆಯಳ ಕಂಡು ದನುಜರೊಡನೆ
ಭರದಿ ರಣವನೆ ಮಾಡಿ ಗೆಲಿದು ದಿವ್ಯಾಸ್ತ್ರಗಳ
ಉರುಹಿ ಲಂಕೆಯ ಬಂದ ಹನುಮಂತನು ॥ 8 ॥
ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿ
ಶರಧಿಯನು ಕಟ್ಟಿ ಬಲು ರಕ್ಕಸರನು
ಒರಸಿ ರಣದಲಿ ದಶಶಿರನ ಹುಡಿಗುಟ್ಟಿದ
ಮೆರೆದ ಹನುಮಂತ ಬಲವಂತ ಧೀರ ॥ 9 ॥
ಉರಗಬಂಧಕೆ ಸಿಲುಕಿ ಕಪಿವರರು ಮೈಮರೆಯೆ
ತರಣಿಕುಲತಿಲಕನಾಜ್ಞೆಯ ತಾಳಿದ
ಗಿರಿಸಹಿತ ಸಂಜೀವನವ ಕಿತ್ತು ತಂದಿತ್ತ
ಹರಿವರಗೆ ಸರಿಯುಂಟೆ ಹನುಮಂತಗೆ ॥ 10 ॥
ವಿಜಯ ರಘುಪತಿ ಮೆಚ್ಚಿ ಧರಣಿಸುತೆಯಳಿಗೀಯೆ
ಭಜಿಸಿ ಮೌಕ್ತಿಕದ ಹಾರವನು ಪಡೆದ
ಅಜಪದವಿಯನು ರಾಮ ಕೊಡುವೆನೆನೆ ಹನುಮಂತ
ನಿಜಭಕುತಿಯನೆ ಬೇಡಿ ವರವ ಪಡೆದ ॥ 11 ॥
ಭೀಮಾವತಾರ
ಆ ಮಾರುತನೆ ಭೀಮನೆನಿಸಿ ದ್ವಾಪರದಲ್ಲಿ
ಸೋಮಕುಲದಲಿ ಜನಿಸಿ ಪಾರ್ಥನೊಡನೆ
ಭೀಮವಿಕ್ರಮ ರಕ್ಕಸರ ಮುರಿದೊಟ್ಟಿದ
ಆ ಮಹಿಮ ನಮ್ಮ ಕುಲಗುರುರಾಯನು ॥ 12 ॥
ಕರದಿಂದ ಶಿಶುಭಾವನಾದ ಭೀಮನ ಬಿಡಲು
ಗಿರಿ ಒಡೆದು ಶತಶೃಂಗವೆಂದೆನಿಸಿತು
ಹರಿಗಳ ಹರಿಗಳಿಂ ಕರಿಗಳ ಕರಿಗಳಿಂ
ಅರೆವ ವೀರನಿಗೆ ಸುರನರರು ಸರಿಯೇ ॥ 13 ॥
ಕುರುಪ ಗರಳವನಿಕ್ಕೆ ನೆರೆ ಉಂಡು ತೇಗಿ
ಹಸಿದುರಗಗಳ ಮ್ಯಾಲೆ ಬಿಡಲದನೊರಸಿದ
ಅರಗಿನರಮನೆಯಲ್ಲಿ ಉರಿಯನಿಕ್ಕಲು ವೀರ
ಧರಿಸಿ ಜಾಹ್ನವಿಗೊಯ್ದ ತನ್ನನುಜರ ॥ 14 ॥
ಅಲ್ಲಿರ್ದ ಬಕ ಹಿಡಿಂಬಕರೆಂಬ ರಕ್ಕಸರ
ನಿಲ್ಲದೊರಸಿದ ಲೋಕಕಂಟಕರನು
ಬಲ್ಲಿದಸುರರ ಗೆಲಿದು ದ್ರೌಪದಿಯ ಕೈವಿಡಿದು
ಎಲ್ಲ ಸುಜನರಿಗೆ ಹರುಷವ ತೋರಿದ ॥ 15 ॥
ರಾಜಕುಲವಜ್ರನೆನಿಸಿದ ಮಾಗಧನ ಸೀಳಿ
ರಾಜಸೂಯಯಾಗವನು ಮಾಡಿಸಿದನು
ಆಜಿಯೊಳು ಕೌರವರ ಬಲವ ಸವರುವೆನೆಂದು
ಮೂಜಗವರಿಯೆ ಕಂಕಣ ಕಟ್ಟಿದ ॥ 16 ॥
ಮಾನನಿಧಿ ದ್ರೌಪದಿಯ ಮನದಿಂಗಿತವನರಿತು
ದಾನವರ ಸವರಬೇಕೆಂದು ಬ್ಯಾಗ
ಕಾನನವ ಪೊಕ್ಕು ಕಿಮ್ಮೀರಾದಿಗಳ ಮುರಿದು
ಮಾನಿನಿಗೆ ಸೌಗಂಧಿಕವನೆ ತಂದ ॥ 17 ॥
ದುರುಳ ಕೀಚಕನು ತಾ ದ್ರೌಪದಿಯ ಚೆಲುವಿಕೆಗೆ
ಮರುಳಾಗಿ ಕರಕರಿಯ ಮಾಡಲವನ
ಗರಡಿಮನೆಯೊಳು ಬರಸಿ ಒರಸಿ ಅವನನ್ವಯವ
ಕುರುಪನಟ್ಟಿದ ಮಲ್ಲಕುಲವ ಸದೆದ ॥ 18 ॥
ಕೌರವರ ಬಲ ಸವರಿ ವೈರಿಗಳ ನೆಗ್ಗೊತ್ತಿ
ಓರಂತೆ ಕೌರವನ ಮುರಿದು ಮೆರೆದ
ವೈರಿ ದುಶ್ಶಾಸನನ ರಣದಲ್ಲಿ ಎಡೆಗೆಡಹಿ
ವೀರ ನರಹರಿಯ ಲೀಲೆಯ ತೋರಿದ ॥ 19 ॥
ಗುರುಸುತನು ಸಂಗರದಿ ನಾರಾಯಣಾಸ್ತ್ರವನು
ಉರವಣಿಸಿ ಬಿಡಲು ಶಸ್ತ್ರವ ಬಿಸುಟರು
ಹರಿಕೃಪೆಯ ಪಡೆದಿರ್ದ ಭೀಮ ಹುಂಕಾರದಲಿ
ಹರಿಯ ದಿವ್ಯಾಸ್ತ್ರವನು ನೆರೆ ಅಟ್ಟಿದ ॥ 20 ॥
ಚಂಡವಿಕ್ರಮನು ಗದೆಗೊಂಡು ರಣದಿ ಭೂ
ಮಂಡಲದೊಳಿದಿರಾಂತ ಖಳರನೆಲ್ಲ
ಹಿಂಡಿ ಬಿಸುಟಿಹ ವೃಕೋದರನ ಪ್ರತಾಪವನು
ಕಂಡು ನಿಲ್ಲುವರಾರು ತ್ರಿಭುವನದೊಳು ॥ 21 ॥
ನಾರಿರೋದನ ಕೇಳಿ ಮನಮರುಗಿ ಗುರುಸುತನ
ಹಾರಿ ಹಿಡಿದು ಶಿರೋರತ್ನವ ಕಿತ್ತು ತೆಗೆದ
ನೀರೊಳಡಗಿದ್ದ ದುರ್ಯೋಧನನ ಹೊರಗೆಡಹಿ
ಊರುದ್ವಯವ ತನ್ನ ಗದೆಯಿಂದ ಮುರಿದ ॥ 22 ॥
ಮಧ್ವಾವತಾರ
ದಾನವರು ಕಲಿಯುಗದೊಳವತರಿಸಿ ವಿಬುಧರೊಳು
ವೇನನ ಮತವನರುಹಲದನರಿತು
ಜ್ಞಾನಿ ತಾ ಪವಮಾನ ಭೂತಳದೊಳವತರಿಸಿ
ಮಾನನಿಧಿ ಮಧ್ವಾಖ್ಯನೆಂದೆನಿಸಿದ ॥ 23 ॥
ಅರ್ಭಕತನದೊಳೈದಿ ಬದರಿಯಲಿ ಮಧ್ವಮುನಿ
ನಿರ್ಭಯದಿ ಸಕಳ ಶಾಸ್ತ್ರವ ಪಠಿಸಿದ
ಉರ್ವಿಯೊಳು ಮಾಯೆ ಬೀರಲು ತತ್ತ್ವಮಾರ್ಗವನು
ಓರ್ವ ಮಧ್ವಮುನಿ ತೋರ್ದ ಸುಜನರ್ಗೆ ॥ 24 ॥
ಸರ್ವೇಶ ಹರ ವಿಶ್ವ ಎಲ್ಲ ತಾ ಪುಸಿಯೆಂಬ
ದುರ್ವಾದಿಗಳ ಮತವ ನೆರೆ ಖಂಡಿಸಿ
ಸರ್ವೇಶ ಹರಿ ವಿಶ್ವ ಸತ್ಯವೆಂದರುಹಿದ
ಶರ್ವಾದಿ ಗೀರ್ವಾಣ ಸಂತತಿಯಲಿ ॥ 25 ॥
ಏಕವಿಂಶತಿ ಕುಭಾಷ್ಯಗಳ ಬೇರನು ತರಿದು
ಶ್ರೀಕರಾರ್ಚಿತನೊಲುಮೆ ಶಾಸ್ತ್ರ ರಚಿಸಿ
ಲೋಕತ್ರಯದೊಳಿದ್ದ ಸುರರು ಆಲಿಸುವಂತೆ
ಆ ಕಮಲನಾಭಯತಿನಿಕರಕೊರೆದ ॥ 26 ॥
ಬದರಿಕಾಶ್ರಮಕೆ ಪುನರಪಿ ಐದಿ ವ್ಯಾಸಮುನಿ
ಪದಕೆರಗಿ ಅಖಿಳ ವೇದಾರ್ಥಗಳನು
ಪದುಮನಾಭನ ಮುಖದಿ ತಿಳಿದು ಬ್ರಹ್ಮತ್ವ
ಐದಿದ ಮಧ್ವಮುನಿರಾಯಗಭಿವಂದಿಪೆ ॥ 27 ॥
ಜಯ ಜಯತು ದುರ್ವಾದಿಮತತಿಮಿರಮಾರ್ತಾಂಡ
ಜಯ ಜಯತು ವಾದಿಗಜಪಂಚಾನನ
ಜಯ ಜಯತು ಚಾರ್ವಾಕಗರ್ವಪರ್ವತಕುಲಿಶ
ಜಯ ಜಯತು ಜಗನ್ನಾಥ ಮಧ್ವನಾಥ ॥ 28 ॥
ತುಂಗಕುಲ ಗುರುವರನ ಹೃತ್ಕಮಲದಲಿ ನಿಲಿಸಿ
ಭಂಗವಿಲ್ಲದೆ ಸುಖವ ಸುಜನಕೆಲ್ಲ
ಹಿಂಗದೆ ಕೊಡುವ ನಮ್ಮ ಮಧ್ವಾಂತರಾತ್ಮಕ
ರಂಗವಿಠಲನೆಂದು ನೆರೆ ಸಾರಿರೈ ॥ 29 ॥
ಫಲಶ್ರುತಿ (ಜಗನ್ನಾಥದಾಸರು)
ಸೋಮಸೂರ್ಯೋಪರಾಗದಿ ಗೋಸಹಸ್ರಗಳ
ಭೂಮಿದೇವರಿಗೆ ಸುರನದಿಯ ತಟದಿ
ಶ್ರೀಮುಕುಂದಾರ್ಪಣವೆನುತ ಕೊಟ್ಟ ಫಲವಕ್ಕು
ಈ ಮಧ್ವನಾಮ ಬರೆದೋದಿದವರಿಗೆ ॥ 30 ॥
ಪುತ್ರರಿಲ್ಲದವರು ಸತ್ಪುತ್ರರೈದುವರು
ಸರ್ವತ್ರದಲಿ ದಿಗ್ವಿಜಯವಹುದನುದಿನ
ಶತ್ರುಗಳು ಕೆಡುವರಪಮೃತ್ಯು ಬರಲಂಜುವುದು
ಸೂತ್ರನಾಮಕನ ಸಂಸ್ತುತಿಮಾತ್ರದಿ ॥ 31 ॥
ಶ್ರೀಪಾದರಾಯ ಪೇಳಿದ ಮಧ್ವನಾಮ ಸಂ
ತಾಪ ಕಳೆದಖಿಳ ಸೌಖ್ಯವನೀವುದು
ಶ್ರೀಪತಿ ಜಗನ್ನಾಥವಿಠಲನ ತೋರಿ ಭವ
ಕೂಪಾರದಿಂದ ಕಡೆ ಹಾಯಿಸುವುದು ॥ 32 ॥
ನುಡಿಗಳ ಅರ್ಥ
- ಪಲ್ಲವಿ ಜಗತ್ತಿನ ಪ್ರಾಣವಾದವನೇ, ಜಗತ್ತಿನೊಳಗಿರುವ ನಿಜವಾದ ಶಕ್ತಿಯೇ, ಎಲ್ಲ ಸದ್ಗುಣಗಳ ನೆಲೆಯೇ, ಮಧ್ವನೆಂಬ ಹೆಸರಿನವನೇ, ನಿನಗೆ ಜಯವಾಗಲಿ, ಜಯವಾಗಲಿ.
Victory, victory to you, life breath of the world, the true strength within the world, abode of every good quality, you who bear the name Madhva. - 1 ಆಮೆಯ (ಕೂರ್ಮ) ರೂಪದಲ್ಲಿ ಬ್ರಹ್ಮಾಂಡದ ನೀರಿನಲ್ಲಿ ಶೇಷನನ್ನು ಪ್ರೀತಿಯಿಂದ ಹೊತ್ತವನು ಯಾರೋ, ಯಾರ ಬೆನ್ನು ಹಿಡಿದು ದೇವತೆಗಳು ಹರಿಯನ್ನು ಸೇರುತ್ತಾರೋ, ಆ ವಾಯುವೇ ನಮ್ಮ ಕುಲಗುರುವಾದ ರಾಜ.
He who in the form of a tortoise lovingly bears Shesha in the waters of the cosmic egg, he by holding to whom the gods reach Hari: that Vayu is the royal guru of our line. - 2 ಯಾರು ದೇಹದೊಳಗಿರುವಾಗ ಹರಿ ಅಲ್ಲಿ ನೆಲೆಸಿರುತ್ತಾನೋ, ಯಾರು ಹೊರಟುಹೋದರೆ ಹರಿಯೂ ಹೊರಟುಹೋಗುತ್ತಾನೋ, ಯಾರು ದೇಹದ ಒಳಗೂ ಹೊರಗೂ ನಿಯಾಮಕನೋ, ಆ ವಾಯುವೇ ನಮ್ಮ ಕುಲಗುರುವಾದ ರಾಜ.
He while he dwells in the body Hari dwells there, when he departs Hari too departs, he who governs the body within and without: that Vayu is the royal guru of our line. - 3 ಇಂದ್ರಿಯಗಳ ಅಭಿಮಾನಿ ದೇವತೆಗಳು ದೇಹವನ್ನು ಬಿಟ್ಟರೆ ಮನುಷ್ಯ ಕುರುಡ, ಕಿವುಡ, ಮೂಕ ಎನಿಸಿಕೊಳ್ಳುತ್ತಾನೆ. ಆದರೆ ಪರಮ ಮುಖ್ಯಪ್ರಾಣನೇ ಹೊರಟುಹೋದರೆ, ಅದನ್ನು ತಿಳಿದ ಜ್ಞಾನಿಗಳು ಆ ದೇಹವನ್ನು ಹೆಣ ಎಂದು ಕರೆಯುತ್ತಾರೆ.
When the gods who preside over the senses leave the body, a person is called blind, deaf or dumb. But when the supreme chief life breath departs, the wise, knowing this, call that body a corpse. - 4 ದೇವತೆಗಳಲ್ಲೂ ಮನುಷ್ಯರಲ್ಲೂ ಎಲ್ಲ ಜೀವಿಗಳಲ್ಲೂ ಶ್ರೇಷ್ಠನೆನಿಸಿ, ಅವರನ್ನು ನಿಯಮಿಸುತ್ತ ನೆಲೆಸಿದ್ದಾನೆ. ಲೋಕದಲ್ಲಿ ಹರಿಯನ್ನಲ್ಲದೆ ಬೇರೆ ಯಾರನ್ನೂ ಅವನು ಲೆಕ್ಕಿಸುವುದಿಲ್ಲ. ಗುರುಕುಲಕ್ಕೆ ತಿಲಕನಾದ ಮುಖ್ಯ ಪವಮಾನನು ಅವನು.
Among gods, among men and among all beings he dwells as the highest, governing them. In all the world he regards none but Hari. He is the chief Pavamana, the crown of the line of gurus. - 5 ತ್ರೇತಾಯುಗದಲ್ಲಿ ರಘುಪತಿ ರಾಮನ ಸೇವೆ ಮಾಡಬೇಕೆಂದು ವಾಯುಪುತ್ರ ಹನುಮಂತನೆನಿಸಿಕೊಂಡನು. ಬಾಲ್ಯದಲ್ಲೇ ಸೂರ್ಯಬಿಂಬದ ಕಡೆಗೆ ನೆಗೆದನು. ಮೂರು ಲೋಕಗಳಲ್ಲಿ ಇವನಿಗೆ ಸಮಾನರು ಯಾರು?
In the Treta age, resolving to serve Rama, lord of the Raghus, he came as Hanuman, son of the Wind. As a child he leapt towards the orb of the sun. Who in the three worlds is his equal? - 6 ಸೂರ್ಯನಿಗೆ ಮುಖಮಾಡಿ ವ್ಯಾಕರಣಶಾಸ್ತ್ರವನ್ನು ಕಲಿಯುತ್ತ, ಅವನ ಜೊತೆ ಹಿಂದುಮುಂದಾಗಿ ರಭಸದಿಂದ ನಡೆದನು. ಉದಯಪರ್ವತದಿಂದ ಅಸ್ತಪರ್ವತದವರೆಗೆ ವೇಗವಾಗಿ ಸಾಗಿದ ಈ ಪವಮಾನಪುತ್ರನಿಗೆ ಹೋಲಿಕೆ ಉಂಟೆ?
Facing the sun he studied grammar, moving eagerly backwards before it as it travelled. Is there any comparison for this son of the Wind, who sped from the mountain of sunrise to the mountain of sunset? - 7 ಮೊದಲೇ ಇವನು ಎಲ್ಲ ವೇದಗಳ ಸಾರವನ್ನು ಓದಿದ್ದನು, ಎಲ್ಲ ವ್ಯಾಕರಣಗಳನ್ನು ವಿವರಿಸಿದ್ದನು. ಇವನ ಬಾಯಲ್ಲಿ ಒಂದೂ ಅಪಶಬ್ದ ಇಲ್ಲವೆಂದು ಕಂಡು ರಾಮನು ಮುಖ್ಯಪ್ರಾಣನನ್ನು ಮೆಚ್ಚಿ ಹತ್ತಿರ ಸೇರಿಸಿಕೊಂಡನು.
He had already studied the essence of all the Vedas and expounded every grammar. Finding not a single faulty word in his speech, Rama was pleased with the chief life breath and drew him close. - 8 ಸೂರ್ಯಪುತ್ರನಾದ ಸುಗ್ರೀವನನ್ನು ಕಾಪಾಡಿ, ಸಮುದ್ರವನ್ನು ಪೂರ್ತಿ ದಾಟಿ, ಭೂಮಿಯ ಮಗಳಾದ ಸೀತೆಯನ್ನು ಕಂಡು, ರಾಕ್ಷಸರೊಡನೆ ರಭಸದಿಂದ ಯುದ್ಧಮಾಡಿ, ದಿವ್ಯಾಸ್ತ್ರಗಳನ್ನು ಗೆದ್ದು, ಲಂಕೆಯನ್ನು ಸುಟ್ಟು ಹನುಮಂತನು ಹಿಂತಿರುಗಿದನು.
Protecting Sugriva, son of the sun, crossing the whole ocean, finding Sita, daughter of the earth, fighting the demons fiercely, overcoming their divine weapons and burning Lanka, Hanuman returned. - 9 ರಾಮನಿಗೆ ಸೀತೆಯ ಚೂಡಾಮಣಿಯನ್ನು ಕೊಟ್ಟು, ಕಪಿಗಳನ್ನು ಕೂಡಿಕೊಂಡು ಸಮುದ್ರಕ್ಕೆ ಸೇತುವೆ ಕಟ್ಟಿ, ಯುದ್ಧದಲ್ಲಿ ಅಸಂಖ್ಯ ರಾಕ್ಷಸರನ್ನು ಅಳಿಸಿ, ಹತ್ತು ತಲೆಯ ರಾವಣನನ್ನು ಗುದ್ದಿ ಪುಡಿಗಟ್ಟಿದನು. ಬಲಶಾಲಿ, ಧೀರ ಹನುಮಂತನು ಹೀಗೆ ಮೆರೆದನು.
He gave Rama the crest jewel of Sita, joined the monkeys in bridging the ocean, wiped out countless demons in battle and pounded ten headed Ravana with his fists. So did Hanuman, mighty and brave, win glory. - 10 ನಾಗಪಾಶಕ್ಕೆ ಸಿಲುಕಿ ಕಪಿವೀರರು ಪ್ರಜ್ಞೆ ತಪ್ಪಿದಾಗ, ಸೂರ್ಯಕುಲತಿಲಕನಾದ ರಾಮನ ಆಜ್ಞೆಯನ್ನು ಹೊತ್ತು, ಬೆಟ್ಟ ಸಹಿತ ಸಂಜೀವಿನಿಯನ್ನು ಕಿತ್ತು ತಂದು ಕೊಟ್ಟನು. ಕಪಿಶ್ರೇಷ್ಠ ಹನುಮಂತನಿಗೆ ಸಮಾನರು ಉಂಟೆ?
When the monkey heroes lay senseless, caught in the serpent noose, he took up the command of Rama, jewel of the solar line, and uprooted the Sanjivani herb with its whole mountain and brought it. Is there any equal to Hanuman, best of monkeys? - 11 ವಿಜಯಿಯಾದ ರಾಮನು ಸಂತೋಷದಿಂದ ಸೀತೆಗೆ ಮುತ್ತಿನ ಹಾರವನ್ನು ಕೊಟ್ಟಾಗ, ಹನುಮಂತನು ಭಕ್ತಿಯಿಂದ ನಮಿಸಿ ಅದನ್ನು ಪಡೆದನು. ರಾಮನು ಬ್ರಹ್ಮಪದವಿಯನ್ನು ಕೊಡುತ್ತೇನೆ ಎಂದಾಗ ಹನುಮಂತನು ನಿಜವಾದ ಭಕ್ತಿಯನ್ನೇ ಬೇಡಿ ವರವಾಗಿ ಪಡೆದನು.
When the victorious Rama, well pleased, gave a pearl necklace to Sita, Hanuman received it with devotion. When Rama offered him the station of Brahma, Hanuman asked only for true devotion and received that as his boon. - 12 ಅದೇ ಮಾರುತನು ದ್ವಾಪರದಲ್ಲಿ ಚಂದ್ರವಂಶದಲ್ಲಿ ಹುಟ್ಟಿ ಭೀಮನೆನಿಸಿಕೊಂಡನು. ಅರ್ಜುನನ ಜೊತೆಗೂಡಿ ಭಯಂಕರ ಪರಾಕ್ರಮದಿಂದ ರಾಕ್ಷಸರನ್ನು ಮುರಿದು ರಾಶಿ ಹಾಕಿದನು. ಆ ಮಹಾತ್ಮನೇ ನಮ್ಮ ಕುಲಗುರುವಾದ ರಾಜ.
That same Wind was born in the Dvapara age in the lunar dynasty and was known as Bhima. Together with Arjuna, with terrible valour he broke the demons and heaped them up. That great one is the royal guru of our line. - 13 ಶಿಶುವಾಗಿದ್ದ ಭೀಮನು ತಾಯಿಯ ಕೈಯಿಂದ ಜಾರಿ ಬಿದ್ದಾಗ ಬೆಟ್ಟ ಒಡೆದು ಶತಶೃಂಗ (ನೂರು ಶಿಖರದ ಬೆಟ್ಟ) ಎನಿಸಿಕೊಂಡಿತು. ಸಿಂಹಗಳನ್ನು ಸಿಂಹಗಳಿಂದ, ಆನೆಗಳನ್ನು ಆನೆಗಳಿಂದಲೇ ಅಪ್ಪಳಿಸಿ ಅರೆಯುವ ಈ ವೀರನಿಗೆ ದೇವತೆಗಳಾಗಲಿ ಮನುಷ್ಯರಾಗಲಿ ಸಮಾನರೇ?
When the infant Bhima slipped from his mother’s hand, the rock split and came to be called Shatashringa, the hundred peaked. Are gods or men equal to this hero, who crushes lions against lions and elephants against elephants? - 14 ಕುರುರಾಜ ದುರ್ಯೋಧನನು ವಿಷವನ್ನು ಉಣಿಸಿದಾಗ ಅದನ್ನು ಪೂರ್ತಿ ಉಂಡು ತೇಗಿದನು. ಹಸಿದ ಹಾವುಗಳನ್ನು ಅವನ ಮೇಲೆ ಬಿಟ್ಟಾಗ ಅವುಗಳನ್ನು ಅಳಿಸಿದನು. ಅರಗಿನ ಅರಮನೆಗೆ ಬೆಂಕಿ ಇಟ್ಟಾಗ ಆ ವೀರನು ತನ್ನ ತಮ್ಮಂದಿರನ್ನು ಹೊತ್ತು ಗಂಗೆಯ ತೀರಕ್ಕೆ ಒಯ್ದನು.
When the Kuru prince Duryodhana fed him poison, he ate it all and belched. When hungry snakes were loosed upon him, he destroyed them. When the house of lac was set on fire, the hero carried his younger brothers away to the Ganga. - 15 ಅಲ್ಲಿದ್ದ ಬಕ, ಹಿಡಿಂಬ ಎಂಬ ಲೋಕಕಂಟಕರಾದ ರಾಕ್ಷಸರನ್ನು ತಡಮಾಡದೆ ಅಳಿಸಿದನು. ಬಲಿಷ್ಠ ಅಸುರರನ್ನು ಗೆದ್ದು ದ್ರೌಪದಿಯ ಕೈಹಿಡಿದು ಎಲ್ಲ ಸಜ್ಜನರಿಗೆ ಹರ್ಷ ತಂದನು.
There he swiftly wiped out the demons Baka and Hidimba, thorns in the side of the world. Defeating mighty foes, he took Draupadi’s hand in marriage and brought joy to all good people. - 16 ರಾಜಕುಲಕ್ಕೆ ವಜ್ರದಂತಿದ್ದ ಮಗಧರಾಜ ಜರಾಸಂಧನನ್ನು ಸೀಳಿ, ರಾಜಸೂಯ ಯಾಗವನ್ನು ನಡೆಸಿದನು. ಯುದ್ಧದಲ್ಲಿ ಕೌರವರ ಸೈನ್ಯವನ್ನು ಕತ್ತರಿಸುತ್ತೇನೆ ಎಂದು ಮೂರು ಲೋಕಗಳಿಗೂ ತಿಳಿಯುವಂತೆ ಕಂಕಣ ಕಟ್ಟಿದನು.
He tore apart Jarasandha, king of Magadha, who was like a thunderbolt among royal lines, and had the Rajasuya sacrifice performed. He tied the vow thread, before the three worlds, that he would cut down the Kaurava army in battle. - 17 ಮಾನವಂತೆ ದ್ರೌಪದಿಯ ಮನಸ್ಸಿನ ಇಂಗಿತವನ್ನು ಅರಿತು, ರಾಕ್ಷಸರನ್ನು ಅಳಿಸಬೇಕೆಂದು ಬೇಗನೆ ಕಾಡನ್ನು ಹೊಕ್ಕು, ಕಿರ್ಮೀರ ಮೊದಲಾದವರನ್ನು ಮುರಿದು, ಆ ಮಾನಿನಿಗೆ ಸೌಗಂಧಿಕ ಹೂವನ್ನು ತಂದುಕೊಟ್ಟನು.
Knowing the unspoken wish of Draupadi, a treasure of honour, and resolved to destroy the demons, he quickly entered the forest, broke Kirmira and others, and brought the saugandhika flower to that proud lady. - 18 ದುಷ್ಟ ಕೀಚಕನು ದ್ರೌಪದಿಯ ಸೌಂದರ್ಯಕ್ಕೆ ಮರುಳಾಗಿ ಕಿರುಕುಳ ಕೊಟ್ಟಾಗ, ಅವನನ್ನು ಗರಡಿಮನೆಗೆ ಬರಮಾಡಿ ಅಳಿಸಿದನು, ಅವನ ವಂಶವನ್ನೂ ಮುಗಿಸಿದನು. ಕುರುರಾಜನು ಕಳಿಸಿದ ಮಲ್ಲರ ಗುಂಪನ್ನೂ ಬಡಿದು ಹಾಕಿದನು.
When wicked Kichaka, crazed by Draupadi’s beauty, harassed her, he lured him to the wrestling hall and destroyed him and then his kin. He also beat down the band of wrestlers sent by the Kuru king. - 19 ಕೌರವರ ಸೈನ್ಯವನ್ನು ಕತ್ತರಿಸಿ, ಶತ್ರುಗಳನ್ನು ಅಮುಕಿ, ಕ್ರಮವಾಗಿ ಕೌರವರನ್ನು ಮುರಿದು ಮೆರೆದನು. ಶತ್ರು ದುಶ್ಶಾಸನನನ್ನು ಯುದ್ಧದಲ್ಲಿ ಕೆಡವಿ, ಆ ವೀರನು ನರಸಿಂಹನ ಲೀಲೆಯನ್ನು ತೋರಿದನು.
Cutting down the Kaurava army and crushing his enemies, he broke the Kauravas one after another and won glory. Felling his enemy Duhshasana in battle, the hero showed the play of Narasimha. - 20 ಗುರುಪುತ್ರ ಅಶ್ವತ್ಥಾಮನು ಯುದ್ಧದಲ್ಲಿ ರಭಸದಿಂದ ನಾರಾಯಣಾಸ್ತ್ರವನ್ನು ಬಿಟ್ಟಾಗ ಎಲ್ಲರೂ ಶಸ್ತ್ರಗಳನ್ನು ಕೆಳಗೆಸೆದರು. ಹರಿಯ ಕೃಪೆ ಪಡೆದಿದ್ದ ಭೀಮನು ಹುಂಕಾರದಿಂದಲೇ ಹರಿಯ ಆ ದಿವ್ಯಾಸ್ತ್ರವನ್ನು ಹಿಮ್ಮೆಟ್ಟಿಸಿದನು.
When Ashvatthama, son of the teacher Drona, loosed the Narayana weapon fiercely in battle, everyone threw down their arms. Bhima, who had the grace of Hari, drove back that divine weapon of Hari with a mere roar. - 21 ಉಗ್ರ ಪರಾಕ್ರಮಿಯು ಗದೆ ಹಿಡಿದು ಯುದ್ಧಭೂಮಿಯಲ್ಲಿ ಎದುರು ನಿಂತ ದುಷ್ಟರೆಲ್ಲರನ್ನೂ ಹಿಂಡಿ ಬಿಸಾಡಿದನು. ವೃಕೋದರ ಭೀಮನ ಈ ಪ್ರತಾಪವನ್ನು ಕಂಡು ಮೂರು ಲೋಕಗಳಲ್ಲಿ ನಿಲ್ಲಬಲ್ಲವರು ಯಾರು?
Mace in hand, the hero of fierce valour wrung out and flung aside all the wicked who stood against him on the field. Who in the three worlds could stand after seeing the might of Vrikodara? - 22 ದ್ರೌಪದಿಯ ಅಳಲನ್ನು ಕೇಳಿ ಮನಸ್ಸು ಕರಗಿ, ಗುರುಪುತ್ರ ಅಶ್ವತ್ಥಾಮನ ಮೇಲೆ ಹಾರಿ ಹಿಡಿದು ಅವನ ತಲೆಯ ರತ್ನವನ್ನು ಕಿತ್ತು ತೆಗೆದನು. ನೀರಿನಲ್ಲಿ ಅಡಗಿದ್ದ ದುರ್ಯೋಧನನನ್ನು ಹೊರಗೆಳೆದು ಅವನ ಎರಡೂ ತೊಡೆಗಳನ್ನು ತನ್ನ ಗದೆಯಿಂದ ಮುರಿದನು.
Moved by the weeping of Draupadi, he leapt upon Ashvatthama, the teacher’s son, seized him and tore the jewel from his head. He drove Duryodhana out of the water where he hid and broke both his thighs with his mace. - 23 ಕಲಿಯುಗದಲ್ಲಿ ದಾನವರು ವಿದ್ವಾಂಸರ ನಡುವೆ ಹುಟ್ಟಿ ವೇನನ ಮತವನ್ನು (ದೇವರನ್ನು ಅಲ್ಲಗಳೆದ ರಾಜ ವೇನನ ದಾರಿಯನ್ನು) ಬೋಧಿಸತೊಡಗಿದರು. ಅದನ್ನು ಅರಿತು ಜ್ಞಾನಿಯಾದ ಪವಮಾನನು ಭೂಮಿಯಲ್ಲಿ ಅವತರಿಸಿ ಮಾನನಿಧಿ ಮಧ್ವನೆಂಬ ಹೆಸರು ಪಡೆದನು.
In the Kali age demons were born among the learned and began to teach the creed of Vena, the king who denied the gods. Knowing this, the wise Pavamana came down to earth and was named Madhva, a treasure of honour. - 24 ಬಾಲ್ಯದಲ್ಲೇ ಬದರಿಗೆ ಹೋಗಿ ಮಧ್ವಮುನಿ ನಿರ್ಭಯವಾಗಿ ಎಲ್ಲ ಶಾಸ್ತ್ರಗಳನ್ನೂ ಓದಿದನು. ಭೂಮಿಯಲ್ಲಿ ಮಾಯಾವಾದ ಹರಡಿದಾಗ ಏಕೈಕನಾದ ಮಧ್ವಮುನಿ ಸಜ್ಜನರಿಗೆ ತತ್ತ್ವದ ದಾರಿಯನ್ನು ತೋರಿದನು.
Going to Badari while still young, Madhva the sage fearlessly studied every shastra. When the doctrine of illusion spread over the earth, Madhva alone showed the path of truth to the good. - 25 ಹರನೇ ಸರ್ವೇಶ, ಈ ವಿಶ್ವವೆಲ್ಲ ಸುಳ್ಳು ಎನ್ನುವ ದುರ್ವಾದಿಗಳ ಮತವನ್ನು ಅವನು ಚೆನ್ನಾಗಿ ಖಂಡಿಸಿದನು. ಶಿವನೇ ಮೊದಲಾದ ದೇವತೆಗಳ ಪರಂಪರೆಯಲ್ಲಿ ಹರಿಯೇ ಸರ್ವೇಶ, ವಿಶ್ವ ಸತ್ಯ ಎಂದು ಸಾರಿದನು.
He thoroughly refuted the creed of the false disputants who say that Hara is lord of all and that the whole world is unreal. He proclaimed that Hari is lord of all, over the whole line of gods beginning with Shiva, and that the world is real. - 26 ಇಪ್ಪತ್ತೊಂದು ಕುಭಾಷ್ಯಗಳ (ಬ್ರಹ್ಮಸೂತ್ರಕ್ಕೆ ಹಿಂದೆ ಬರೆದ ತಪ್ಪು ವ್ಯಾಖ್ಯಾನಗಳ) ಬೇರನ್ನು ಕತ್ತರಿಸಿ, ಲಕ್ಷ್ಮಿ ತನ್ನ ಕೈಯಿಂದ ಪೂಜಿಸುವ ಹರಿಗೆ ಪ್ರಿಯವಾದ ಶಾಸ್ತ್ರವನ್ನು ರಚಿಸಿ, ಮೂರು ಲೋಕಗಳ ದೇವತೆಗಳೂ ಕೇಳುವಂತೆ ಪದ್ಮನಾಭ ತೀರ್ಥರೇ ಮೊದಲಾದ ಯತಿಗಳ ಸಮೂಹಕ್ಕೆ ಬೋಧಿಸಿದನು.
Cutting at the root the twenty one faulty commentaries written earlier on the Brahma Sutras, and composing shastras dear to Hari, who is worshipped by the hand of Lakshmi, he taught them to Padmanabha Tirtha and the company of ascetics, so that the gods of the three worlds too might listen. - 27 ಮತ್ತೆ ಬದರಿಕಾಶ್ರಮಕ್ಕೆ ಹೋಗಿ ವ್ಯಾಸಮುನಿಯ ಪಾದಗಳಿಗೆ ನಮಿಸಿ, ಪದ್ಮನಾಭನ (ವ್ಯಾಸರೂಪಿ ಹರಿಯ) ಬಾಯಿಂದಲೇ ಎಲ್ಲ ವೇದಗಳ ಅರ್ಥವನ್ನು ತಿಳಿದು, ಬ್ರಹ್ಮತ್ವವನ್ನು (ಬ್ರಹ್ಮಪದವಿಯ ಯೋಗ್ಯತೆಯನ್ನು) ಪಡೆದ ಮಧ್ವಮುನಿರಾಯನಿಗೆ ನಮಸ್ಕರಿಸುತ್ತೇನೆ.
Going once more to Badarikashrama and bowing at the feet of the sage Vyasa, he learnt the meaning of all the Vedas from the very mouth of Padmanabha, Hari in the form of Vyasa. I bow to Madhva, king of sages, who attained the rank of Brahma. - 28 ದುರ್ವಾದಿಗಳ ಮತವೆಂಬ ಕತ್ತಲಿಗೆ ಸೂರ್ಯನಾದವನೇ, ಜಯವಾಗಲಿ. ವಾದಿಗಳೆಂಬ ಆನೆಗಳಿಗೆ ಸಿಂಹನಾದವನೇ, ಜಯವಾಗಲಿ. ಚಾರ್ವಾಕರ ಗರ್ವವೆಂಬ ಪರ್ವತಕ್ಕೆ ವಜ್ರಾಯುಧನಾದವನೇ, ಜಯವಾಗಲಿ. ಜಗನ್ನಾಥನೇ, ಮಧ್ವನಾಥನೇ, ಜಯವಾಗಲಿ (ಈ ಕೊನೆಯ ಸಂಬೋಧನೆಯನ್ನು ಮಧ್ವರ ಒಡೆಯನಾದ ಹರಿಗೆ ಎಂದೂ ಓದುತ್ತಾರೆ).
Victory to you, sun to the darkness of the false disputants’ creeds. Victory to you, lion to the elephants of debaters. Victory to you, thunderbolt to the mountain of Charvaka pride. Victory to you, lord of the world, lord Madhva (some read this last address as to Hari, Madhva’s lord). - 29 ಶ್ರೇಷ್ಠ ಕುಲದ ಗುರುವರನನ್ನು ಹೃದಯಕಮಲದಲ್ಲಿ ನಿಲ್ಲಿಸಿಕೊಳ್ಳಿ. ಸಜ್ಜನರೆಲ್ಲರಿಗೆ ಭಂಗವಿಲ್ಲದ ಸುಖವನ್ನು ತಪ್ಪದೆ ಕೊಡುವವನು ಮಧ್ವರ ಅಂತರಾತ್ಮನಾದ ನಮ್ಮ ರಂಗವಿಠಲ ಎಂದು ಗಟ್ಟಿಯಾಗಿ ಸಾರಿರಿ.
Set the best of gurus, of the noble line, in the lotus of your heart. Proclaim aloud that our Rangavittala, the inner self of Madhva, never fails to give unbroken happiness to all good people. - 30 ಚಂದ್ರಗ್ರಹಣ ಸೂರ್ಯಗ್ರಹಣಗಳ ಹೊತ್ತಿನಲ್ಲಿ ಗಂಗೆಯ ದಡದಲ್ಲಿ ಸಾವಿರಾರು ಗೋವುಗಳನ್ನು ಶ್ರೀಮುಕುಂದಾರ್ಪಣ ಎಂದು ಬ್ರಾಹ್ಮಣರಿಗೆ ದಾನ ಕೊಟ್ಟ ಫಲ, ಈ ಮಧ್ವನಾಮವನ್ನು ಬರೆದು ಓದುವವರಿಗೆ ದೊರೆಯುತ್ತದೆ.
The merit of giving thousands of cows to Brahmins on the bank of the Ganga at an eclipse of the moon or sun, saying offered to Sri Mukunda, comes to those who write out and read this Madhvanama. - 31 ಮಕ್ಕಳಿಲ್ಲದವರು ಸತ್ಪುತ್ರರನ್ನು ಪಡೆಯುತ್ತಾರೆ. ಎಲ್ಲೆಡೆ ಪ್ರತಿದಿನ ದಿಗ್ವಿಜಯವಾಗುತ್ತದೆ. ಶತ್ರುಗಳು ಹಾಳಾಗುತ್ತಾರೆ, ಅಕಾಲಮೃತ್ಯು ಬರಲು ಹೆದರುತ್ತದೆ. ಸೂತ್ರನೆಂಬ ಹೆಸರಿನ ವಾಯುದೇವರ ಸ್ತುತಿ ಮಾತ್ರದಿಂದಲೇ ಇದೆಲ್ಲ ಆಗುತ್ತದೆ.
The childless gain good sons. Victory comes everywhere, day after day. Enemies come to ruin and untimely death is afraid to approach. All this comes from merely praising Vayu, who is called Sutra. - 32 ಶ್ರೀಪಾದರಾಯರು ಹೇಳಿದ ಈ ಮಧ್ವನಾಮ ಸಂತಾಪವನ್ನು ಕಳೆದು ಎಲ್ಲ ಸುಖವನ್ನೂ ಕೊಡುತ್ತದೆ. ಲಕ್ಷ್ಮೀಪತಿಯಾದ ಜಗನ್ನಾಥವಿಠಲನನ್ನು ತೋರಿಸಿ, ಸಂಸಾರವೆಂಬ ಸಮುದ್ರದಿಂದ ದಡ ಸೇರಿಸುತ್ತದೆ.
This Madhvanama, sung by Sripadaraya, takes away distress and gives every happiness. It reveals Jagannathavittala, the lord of Lakshmi, and carries one across the ocean of worldly life to the far shore.
ಈ ಸ್ತೋತ್ರದ ಬಗ್ಗೆAbout this hymn
ಶ್ರೀಪಾದರಾಜರು (ಸುಮಾರು 1406 ರಿಂದ 1504 ಎಂದು ಪರಂಪರೆ ಹೇಳುತ್ತದೆ) ಮುಳಬಾಗಿಲಿನ ಮಠದ ಯತಿಗಳು, ವ್ಯಾಸತೀರ್ಥರ ಗುರುಗಳು. ಕನ್ನಡದಲ್ಲಿ ಹರಿದಾಸ ಕೀರ್ತನೆಗಳನ್ನು ರಚಿಸಿದ ಮೊದಲಿಗರಲ್ಲಿ ಇವರು ಒಬ್ಬರು ಎಂದು ಹಲವರು ಗುರುತಿಸುತ್ತಾರೆ. ಕೊನೆಯ ಮೂರು ನುಡಿಗಳ ಫಲಶ್ರುತಿಯನ್ನು ಹದಿನೆಂಟನೇ ಶತಮಾನದ ಜಗನ್ನಾಥದಾಸರು ಸೇರಿಸಿದರು, ಅದರಲ್ಲಿ ಅವರ ಅಂಕಿತ ಜಗನ್ನಾಥವಿಠಲ ಬರುತ್ತದೆ.
Sripadaraja (by tradition about 1406 to 1504) was the pontiff of the monastery at Mulbagal and the teacher of Vyasatirtha. Many regard him as one of the first to compose Haridasa songs in Kannada. The phalashruti of the last three verses was added by Jagannathadasa in the eighteenth century, and carries his own signature, Jagannathavittala.
ಇದೊಂದು ಮಾಧ್ವ ಪರಂಪರೆಯ ಕೃತಿ. ಅದರ ಪ್ರಕಾರ ವಾಯುದೇವರೇ ತ್ರೇತೆಯಲ್ಲಿ ಹನುಮಂತನಾಗಿ, ದ್ವಾಪರದಲ್ಲಿ ಭೀಮನಾಗಿ, ಕಲಿಯುಗದಲ್ಲಿ ಮಧ್ವಾಚಾರ್ಯರಾಗಿ ಬಂದರು. ಹಾಡು ಅದೇ ಕ್ರಮದಲ್ಲಿದೆ: 1 ರಿಂದ 4 ವಾಯುದೇವರ ಮಹಿಮೆ, 5 ರಿಂದ 11 ಹನುಮಂತ, 12 ರಿಂದ 22 ಭೀಮ, 23 ರಿಂದ 29 ಮಧ್ವಾಚಾರ್ಯರು, 30 ರಿಂದ 32 ಫಲಶ್ರುತಿ. 23 ಮತ್ತು 25ನೇ ನುಡಿಗಳು ಎದುರು ಮತವನ್ನು, ಮುಖ್ಯವಾಗಿ ಅದ್ವೈತವನ್ನು, ಕಟುವಾಗಿ ಟೀಕಿಸುತ್ತವೆ. ಇವು ಮತಗಳ ನಡುವೆ ತೀವ್ರ ವಾದವಿವಾದ ನಡೆಯುತ್ತಿದ್ದ ಕಾಲದ ಮಾತುಗಳು.
This is a work of the Madhva tradition, which holds that Vayu came as Hanuman in the Treta age, as Bhima in the Dvapara and as Madhvacharya in the Kali age. The song follows that order: verses 1 to 4 on the greatness of Vayu, 5 to 11 Hanuman, 12 to 22 Bhima, 23 to 29 Madhvacharya, and 30 to 32 the phalashruti. Verses 23 and 25 speak sharply against the opposing school, chiefly Advaita. They belong to an age of fierce debate between the schools.
ಸಾಲುಗಳ ವಿಂಗಡಣೆಯನ್ನು vignanam ಆವೃತ್ತಿಯಿಂದ ತೆಗೆದುಕೊಂಡು holagi.in (ಜಯತೀರ್ಥ ಕಟ್ಟಿ, 2022) ಆವೃತ್ತಿಯೊಂದಿಗೆ ಹೋಲಿಸಿದ್ದೇವೆ. ಹೆಚ್ಚಿನ ಹಾಡುಗಾರರು 29 ನುಡಿಗಳನ್ನು ಹಾಡುತ್ತಾರೆ. vignanam ಪಾಠದಲ್ಲಿ ಇಲ್ಲದ ನಾರಿರೋದನ (22) ಮತ್ತು ಏಕವಿಂಶತಿ (26) ನುಡಿಗಳನ್ನು holagi ಆವೃತ್ತಿಯಿಂದ ಸೇರಿಸಿದ್ದೇವೆ. 3ರಲ್ಲಿ ಕರಣಾಭಿಮಾನಿ (vignanam: ಕರುಣಾ) ಎಂಬ ಪಾಠವನ್ನು ಆರಿಸಿದ್ದೇವೆ. 17 ಮತ್ತು 18ರಲ್ಲಿ holagi ಪಾಠವನ್ನು ಅನುಸರಿಸಿದ್ದೇವೆ.
We take the lineation from vignanam and have collated it with holagi.in (Jayateerth Katti, 2022). Most singers sing 29 verses. The verses beginning naarirodana (22) and ekavimshati (26), missing in vignanam, are added from holagi. In verse 3 we read karanaabhimaani (vignanam has karunaa). In verses 17 and 18 we follow holagi.
25ನೇ ನುಡಿಯಲ್ಲಿ ಎದುರಾಳಿಗಳ ವಾದವನ್ನು ಸರ್ವೇಶ ಹರ ಎಂದೂ, ಮಧ್ವರ ಉತ್ತರವನ್ನು ಸರ್ವೇಶ ಹರಿ ಎಂದೂ ಓದಿದ್ದೇವೆ. vignanam ಎರಡೂ ಕಡೆ ಹರಿ ಎಂದು ಕೊಡುತ್ತದೆ. ಜಗನ್ನಾಥದಾಸರ ಫಲಶ್ರುತಿಯ ನುಡಿಗಳನ್ನು ಮೂಲಗಳು 1 ರಿಂದ 3 ಎಂದು ಎಣಿಸುತ್ತವೆ, ನಾವು 30 ರಿಂದ 32 ಎಂದು ಎಣಿಸಿದ್ದೇವೆ. ಇದೊಂದು ಕನ್ನಡ ಕೃತಿ ಆದ್ದರಿಂದ ದೇವನಾಗರಿ ಮತ್ತು IAST ಪಾಠಗಳನ್ನು ಈ ಪುಟದಲ್ಲಿ ಕೊಟ್ಟಿಲ್ಲ.
In verse 25 we read sarvesha hara in the opponents’ claim and sarvesha hari in Madhva’s reply, whereas vignanam has hari in both places. The sources number Jagannathadasa’s phalashruti verses 1 to 3, and we number them 30 to 32. As this is a Kannada composition, we have not given Devanagari and IAST versions on this page.
ಆಧಾರ: ಹಲವು ಮೂಲಗಳು. ಆವೃತ್ತಿಗಳು ಭಿನ್ನವಾಗಿರುವಲ್ಲಿ ಅದನ್ನು ಇಲ್ಲಿ ಸೂಚಿಸಿದ್ದೇವೆ. · Sources: several. Where readings differ, the difference is noted here.
ಇಂದಿನ ಬದುಕಿಗೆFor life today
ಮೂರನೇ ನುಡಿ ಒಂದು ಸರಳ ವ್ಯತ್ಯಾಸವನ್ನು ಹೇಳುತ್ತದೆ. ಕಣ್ಣು, ಕಿವಿ, ಮಾತು ಹೋದರೂ ಮನುಷ್ಯ ಮನುಷ್ಯನೇ, ಪ್ರಾಣ ಹೋದಾಗ ಮಾತ್ರ ದೇಹ ಹೆಣವಾಗುತ್ತದೆ. ಆದರೂ ಮನೆಯ ಊಟದ ಮೇಜಿನ ಸುತ್ತ ಕಿವಿ ಸರಿಯಾಗಿ ಕೇಳದ ಹಿರಿಯರನ್ನು ನಾವು ಅರಿಯದೆ ಮಾತುಕತೆಯಿಂದ ಹೊರಗಿಡುತ್ತೇವೆ.
The third verse draws a plain distinction. A person who loses sight, hearing or speech is still wholly a person, and only when the life breath goes does the body become a corpse. Yet around the family dinner table we often, without meaning to, leave out of the conversation an elder who cannot hear well.
ಸ್ವಲ್ಪ ಹತ್ತಿರ ಕುಳಿತು, ನಿಧಾನವಾಗಿ ಸ್ಪಷ್ಟವಾಗಿ ಮಾತನಾಡಿದರೆ ಅವರು ಮತ್ತೆ ಮಾತುಕತೆಯೊಳಗೆ ಬರುತ್ತಾರೆ.
Sitting a little closer and speaking slowly and clearly brings them back into the conversation.

