ಏಕಂ ಸತ್, ವಿಪ್ರಾಃ ಬಹುಧಾ ವದಂತಿ: ಸತ್ಯದ ಬಹುಮುಖಿ ದರ್ಶನ
“ಏಕಂ ಸತ್ ವಿಪ್ರಾಃ ಬಹುಧಾ ವದಂತಿ” (एकं सत् विप्राः बहुधा वदन्ति)
ವೇದಾಂತವಾದ ಉಪನಿಷತ್ತುಗಳಲ್ಲಿ ಮತ್ತು ವೇದಗಳಲ್ಲಿ ಅಡಗಿರುವ ಈ ಸಾಲು ಕೇವಲ ಒಂದು ವಾಕ್ಯವಲ್ಲ, ಇದೊಂದು ಜೀವನ ಸೂತ್ರ. ಭಾರತೀಯ ತತ್ವಶಾಸ್ತ್ರದ ಮತ್ತು ಸನಾತನ ಧರ್ಮದ ಬುನಾದಿಯೇ ಈ ಸಾಲಿನಲ್ಲಿದೆ ಎನ್ನಬಹುದು. ಸಾಮಾನ್ಯವಾಗಿ ಇದರ ಅರ್ಥವನ್ನು “ಸತ್ಯವೊಂದೇ… ಆದರೆ ತಿಳಿದವರು ಅದನ್ನು ಬೇರೆ ಬೇರೆ ಹೆಸರುಗಳಲ್ಲಿ ಕರೆಯುತ್ತಾರೆ” ಅಥವಾ “ದೇವರು ಒಬ್ಬನೇ, ನಾಮ ಹಲವು” ಎಂದು ಸರಳವಾಗಿ ಹೇಳಲಾಗುತ್ತದೆ. ಆದರೆ ಇದರ ಆಳವಾದ ಅರ್ಥವಿರುವುದು ಸನಾತನ ಧರ್ಮದ ವೈವಿಧ್ಯತೆಯಲ್ಲಿ.
ಅಸ್ತಿತ್ವದಲ್ಲಿರುವಂತಹ “ಪರಮ ಸತ್ಯ” (Ultimate Reality) ಒಂದೇ. ಆದರೆ ಆ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡ ಋಷಿಮುನಿಗಳು ಅದನ್ನು ತಮ್ಮದೇ ಆದ ರೀತಿಯಲ್ಲಿ, ಬಹುಧಾ (ಹಲವು) ಹೆಸರುಗಳಿಂದ ಸಂಬೋಧಿಸಿದರು. ನಮ್ಮಲ್ಲಿರುವ ಅದ್ವೈತ, ದ್ವೈತ, ಶೈವ, ವೈಷ್ಣವ, ಶಾಕ್ತ ಮುಂತಾದ ವೈವಿಧ್ಯಮಯ ಸಂಪ್ರದಾಯಗಳು, ಹಾಗೂ ವಿಷ್ಣು, ಶಿವ, ಗಣೇಶ, ದುರ್ಗೆ, ಸುಬ್ರಹ್ಮಣ್ಯ, ಆದಿತ್ಯ ಎಂಬ ಹತ್ತು ಹಲವು ದೇವತೆಗಳ ಆರಾಧನೆಯು ಮೇಲ್ನೋಟಕ್ಕೆ ಬೇರೆ ಬೇರೆ ಸಿದ್ಧಾಂತಗಳಂತೆ ಕಂಡರೂ, ಅವೆಲ್ಲವೂ ಬೆರಳು ಮಾಡಿ ತೋರಿಸುವುದು ಇದೇ “ಏಕಂ ಸತ್” ಅಥವಾ ಏಕಮೇವಾದ್ವಿತೀಯವಾದ ಪರಬ್ರಹ್ಮವನ್ನೇ.
ಮೂಲ ಮತ್ತು ಪ್ರಮಾಣ
ವೇದಾಂತದ ಸಾರ ಎಂದು ಕರೆಯಲ್ಪಡುವ ಈ ವಾಕ್ಯದ ಮೂಲ ಇರುವುದು ಋಗ್ವೇದದಲ್ಲಿ. ಪ್ರಥಮ ಮಂಡಲದ ೧೬೪ನೇ ಸೂಕ್ತದ ೪೬ನೇ ಮಂತ್ರದಲ್ಲಿ ಋಷಿಗಳು ಹೀಗೆ ಹೇಳುತ್ತಾರೆ:
ಇಂದ್ರಂ ಮಿತ್ರಂ ವರುಣಮಗ್ನಿಮಾಹುರಥೋ ಸ ದಿವ್ಯೋ ಸುಪರ್ಣೋ ಗರುತ್ಮಾನ್ ।
ಏಕಂ ಸದ್ವಿಪ್ರಾ ಬಹುಧಾ ವದಂತಿ ಅಗ್ನಿಂ ಯಮಂ ಮಾತರಿಶ್ವಾನಮಾಹುಃ ॥ (ಋಗ್ವೇದ ೧।೧೬೪।೪೬)
ಅರ್ಥ: “ಅವರು ಆ ಪರಮ ಸತ್ಯವನ್ನು ಇಂದ್ರ, ಮಿತ್ರ, ವರುಣ, ಅಗ್ನಿ ಮತ್ತು ದಿವ್ಯ ಗರುತ್ಮಾನ ಎಂದು ಕರೆಯುತ್ತಾರೆ. ನಿಸ್ಸಂಶಯವಾಗಿ ಇರುವುದು ಒಂದೇ ಸತ್ಯ (ಏಕಂ ಸತ್); ಅದಕ್ಕೆ ಜ್ಞಾನಿಗಳು ಅಗ್ನಿ, ಯಮ, ಮಾತರಿಶ್ವಾನ ಎಂದು ಬಹುವಿಧ ಹೆಸರುಗಳನ್ನು ನೀಡಿದ್ದಾರೆ.”
ಆಕಾಶಾತ್ ಪತಿತಂ ತೋಯಂ
ಈ ವೈದಿಕ ಸತ್ಯವು ಕೇವಲ ಗ್ರಂಥಗಳಿಗೆ ಸೀಮಿತವಾಗದೆ, ನಮ್ಮ ನಿತ್ಯ ಪೂಜೆಯ ಪ್ರಾರ್ಥನೆಯಲ್ಲೂ ಬೆರೆತುಹೋಗಿದೆ. ಸಂಧ್ಯಾವಂದನೆ ಅಥವಾ ಪೂಜೆಯ ಅಂತ್ಯದಲ್ಲಿ ನಾವು ಹೇಳುವ ಈ ಶ್ಲೋಕವೇ ಇದಕ್ಕೆ ಸಾಕ್ಷಿ:
ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ ।
ಸರ್ವ ದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ ॥
“ಹೇಗೆ ಆಕಾಶದಿಂದ ಬೀಳುವ ಮಳೆಹನಿಗಳು ನದಿಗಳಾಗಿ ಹರಿದು ಅಂತಿಮವಾಗಿ ಸೇರುವುದು ಒಂದೇ ಸಾಗರವನ್ನೋ, ಹಾಗೇ ನಾವು ಯಾವುದೇ ದೇವರಿಗೆ, ಯಾವುದೇ ರೂಪದಲ್ಲಿ ನಮಸ್ಕಾರ ಮಾಡಿದರೂ ಅದು ತಲುಪುವುದು ಆ ಒಬ್ಬನೇ ಆದ ಪರಮಾತ್ಮನಿಗೆ.”
ಆಧ್ಯಾತ್ಮಿಕ ಮತ್ತು ಮಾನಸಿಕ ವಿಜ್ಞಾನ
ಇಲ್ಲಿ ನಾವು ಒಂದು ಮುಖ್ಯ ಪ್ರಶ್ನೆಯನ್ನು ಕೇಳಿಕೊಳ್ಳಬೇಕು: ದೇವರು ಒಬ್ಬನೇ ಆಗಿದ್ದರೂ, ಋಷಿಗಳು ಇಷ್ಟೊಂದು ದೇವತೆಗಳನ್ನು ಮತ್ತು ಪೂಜಾ ಪದ್ಧತಿಗಳನ್ನು ಏಕೆ ಸೃಷ್ಟಿಸಿದರು? ಇದರ ಹಿಂದೆ ಅಡಗಿರುವುದು ನಮ್ಮ ಪೂರ್ವಜರ ಪ್ರಗತಿಪರ ಚಿಂತನೆ ಮತ್ತು ಅತ್ಯುನ್ನತ ಮನೋವಿಜ್ಞಾನ.
ಇದನ್ನು ನಾವು ಈ ಕೆಳಗಿನ ಮೂರು ಆಯಾಮಗಳಲ್ಲಿ ವಿಶ್ಲೇಷಿಸಬಹುದು:
೧. ಅಧಿಕಾರಿ ಭೇದ (Individual Competency): ಸನಾತನ ಧರ್ಮದ ಸೌಂದರ್ಯವಿರುವುದೇ “ಅಧಿಕಾರಿ ಭೇದ”ದ ಪರಿಕಲ್ಪನೆಯಲ್ಲಿ. ಸಮಾಜದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಮಾನಸಿಕ ಪಕ್ವತೆ, ಬೌದ್ಧಿಕ ಸಾಮರ್ಥ್ಯ (IQ), ಮತ್ತು ಪೂರ್ವಜನ್ಮದ ಸಂಸ್ಕಾರ ಒಂದೇ ರೀತಿ ಇರುವುದಿಲ್ಲ. ಕೆಲವರಿಗೆ ತರ್ಕ (Logic) ಇಷ್ಟವಾದರೆ, ಹಲವರಿಗೆ ಭಾವನೆ (Emotion) ಮುಖ್ಯವಾಗುತ್ತದೆ. ಕಣ್ಣಿಗೆ ಕಾಣದ, ಆಕಾರವಿಲ್ಲದ “ನಿರ್ಗುಣ ಬ್ರಹ್ಮ”ನನ್ನು ಧ್ಯಾನಿಸುವುದು ಎಲ್ಲರಿಗೂ ಬಹಳ ಕಷ್ಟ. ಅಂತಹ ಸೂಕ್ಷ್ಮ ತತ್ವವನ್ನು ಅರ್ಥಮಾಡಿಕೊಳ್ಳಲು ಎಲ್ಲರೂ “ಅಧಿಕಾರಿ”ಗಳಾಗಿರುವುದಿಲ್ಲ. ಆದ್ದರಿಂದ, ಸಾಮಾನ್ಯ ಮನುಷ್ಯನಿಗೆ ಗ್ರಹಿಸಲು ಸುಲಭವಾಗುವಂತೆ, ಅದೇ ಸತ್ಯವನ್ನು ಬೇರೆ ಬೇರೆ ರೂಪಗಳಲ್ಲಿ (ಸಗುಣ ಸಾಕಾರ) ನೀಡಲಾಯಿತು.
೨. ಇಷ್ಟ ದೇವತಾ ಪರಿಕಲ್ಪನೆ: ಮನಃಶಾಸ್ತ್ರದ ಪ್ರಕಾರ, ಮನುಷ್ಯನು ತಾನು ಪ್ರೀತಿಸುವ ವ್ಯಕ್ತಿ ಅಥವಾ ವಸ್ತುವಿನ ಮೇಲೆ ಮಾತ್ರ ದೀರ್ಘಕಾಲದವರೆಗೆ ಏಕಾಗ್ರತೆಯನ್ನು ಇಡಬಲ್ಲ. ಇದನ್ನೇ ಆಧಾರವಾಗಿಟ್ಟುಕೊಂಡು “ಇಷ್ಟ ದೇವತೆ”ಯ ಸ್ವಾತಂತ್ರ್ಯವನ್ನು ನೀಡಲಾಯಿತು. ಒಬ್ಬ ವ್ಯಕ್ತಿಗೆ ಮಾತೃವಾತ್ಸಲ್ಯದ ಅಗತ್ಯವಿದ್ದರೆ, ಅವನು ದೇವಿಯನ್ನು ಪೂಜಿಸಬಹುದು; ಶಿಸ್ತು ಮತ್ತು ಧೈರ್ಯ ಬೇಕಿದ್ದರೆ ಹನುಮಂತನನ್ನು ಆರಾಧಿಸಬಹುದು. ಭಕ್ತನ ಸ್ವಭಾವಕ್ಕೆ (Nature) ತಕ್ಕಂತೆ ದೇವರನ್ನು ಆರಿಸಿಕೊಳ್ಳುವ ಈ ಮುಕ್ತ ಸ್ವಾತಂತ್ರ್ಯ ಜಗತ್ತಿನ ಬೇರೆ ಯಾವ ಮತಗಳಲ್ಲೂ ಅಷ್ಟು ಸುಲಭವಾಗಿ ಕಾಣಸಿಗುವುದಿಲ್ಲ.
೩. ಆಲಂಬನ: ಗಾಳಿಪಟವೊಂದು ಮೇಲೆ ಹಾರಲು ದಾರದ ಆಸರೆ ಹೇಗೆ ಬೇಕೋ, ಹಾಗೆಯೇ ಚಂಚಲವಾದ ಮನಸ್ಸನ್ನು ಹತೋಟಿಯಲ್ಲಿಡಲು ಒಂದು “ಆಲಂಬನ” (Support) ಅಥವಾ ಮೂರ್ತಿಯ ಅಗತ್ಯವಿರುತ್ತದೆ. ಪ್ರಾರಂಭಿಕ ಹಂತದಲ್ಲಿ ವಿಗ್ರಹದ ಮೂಲಕ ಮನಸ್ಸನ್ನು ಏಕಾಗ್ರಗೊಳಿಸಿ, ಭಕ್ತಿ ಪಕ್ವವಾದ ನಂತರ ಅದೇ ವಿಗ್ರಹದಲ್ಲಿರುವ ಚೈತನ್ಯವನ್ನು ವಿಶ್ವವ್ಯಾಪಿಯಾಗಿ ಕಾಣುವುದು ನಮ್ಮ ಆಧ್ಯಾತ್ಮಿಕ ಏಳಿಗೆಯ ಕ್ರಮ.
ವೈದ್ಯಕೀಯ ದೃಷ್ಟಿಕೋನ: “Precision Spirituality”
ಒಬ್ಬ ವೈದ್ಯನಾಗಿ ಇದನ್ನು ಗಮನಿಸಿದಾಗ, ನನಗೆ ಇದು ಆಧುನಿಕ ವೈದ್ಯಕೀಯ ಕ್ಷೇತ್ರದ “Personalized Medicine” ಅಥವಾ “Precision Medicine”ಗೆ ಬಹಳ ಹತ್ತಿರವೆನಿಸುತ್ತದೆ.
ಹೇಗೆ ಒಬ್ಬ ರೋಗಿಗೆ ಕೊಡುವ ಔಷಧಿಯು ಇನ್ನೊಬ್ಬ ರೋಗಿಗೆ, ಅವನ ದೇಹದ ತೂಕ, ವಯಸ್ಸು ಮತ್ತು ಜೆನೆಟಿಕ್ಸ್ (Genetics) ಆಧಾರದ ಮೇಲೆ ಬದಲಾಗುತ್ತದೆಯೋ, ಹಾಗೆಯೇ ಪ್ರತಿಯೊಬ್ಬರ ಆಧ್ಯಾತ್ಮಿಕ ಹಸಿವು ಮತ್ತು ಅಗತ್ಯಗಳು ಸಹಾ ಬೇರೆ ಬೇರೆಯಾಗಿರುತ್ತವೆ. “ಎಲ್ಲರಿಗೂ ಒಂದೇ ಮಾತ್ರೆ” (One size fits all) ಎಂಬುದು ವೈದ್ಯಕೀಯದಲ್ಲಿ ಹೇಗೆ ಅವೈಜ್ಞಾನಿಕವೋ, ಆಧ್ಯಾತ್ಮದಲ್ಲೂ ಹಾಗೆಯೇ. ಋಷಿಗಳು ಪ್ರತಿಯೊಬ್ಬ ವ್ಯಕ್ತಿಯ ಮನಸ್ಥಿತಿಗೆ ತಕ್ಕಂತೆ ಚಿಕಿತ್ಸೆ ಅಥವಾ ಪೂಜಾ ವಿಧಾನವನ್ನು ರೂಪಿಸಿಕೊಟ್ಟಿದ್ದಾರೆ. ಇದನ್ನು ನಾವು “Personalized Spirituality” ಎಂದು ಕರೆಯಬಹುದು.
ಕೊನೆ ಮಾತು
ಅಂತಿಮವಾಗಿ, “ಏಕಂ ಸತ್ ವಿಪ್ರಾಃ ಬಹುಧಾ ವದಂತಿ” ಎಂಬುದು ಕೇವಲ ದೇವತೆಗಳ ಪಟ್ಟಿಯಲ್ಲ. ಅದು ಮನುಷ್ಯನ ಮನಸ್ಸಿನ ವೈವಿಧ್ಯತೆಯನ್ನು ಗೌರವಿಸಿ, ಪ್ರತಿಯೊಬ್ಬರಿಗೂ ಅವರವರ ಮಟ್ಟಕ್ಕೆ ಇಳಿದು ಬಂದು ಕೈಹಿಡಿದು ನಡೆಸುವ ಒಂದು ಉದಾರವಾದಿ ಮತ್ತು ವೈಜ್ಞಾನಿಕ ಮನೋಧರ್ಮ.