ಶ್ರೀರಾಮನ ನಡೆ, ಶ್ರೀಕೃಷ್ಣನ ನುಡಿ: ಧರ್ಮಮಾರ್ಗದ ಎರಡು ಮುಖಗಳು
ರಾಮನ ನಡೆ ಚೆಂದ, ಕೃಷ್ಣನ ನುಡಿ ಚೆಂದ.
ನಮ್ಮ ಪರಂಪರೆಯಲ್ಲಿ ಅತ್ಯಂತ ಅರ್ಥಗರ್ಭಿತವಾದ ಹಾಗೂ ಜನಪ್ರಿಯವಾದ ಗಾದೆಯೊಂದಿದೆ: “ರಾಮನ ನಡೆ ಚೆಂದ, ಕೃಷ್ಣನ ನುಡಿ ಚೆಂದ.” ಮನುಷ್ಯನ ಬದುಕು ಹೇಗಿರಬೇಕು, ಆತನ ಕರ್ತವ್ಯಗಳೇನು ಎಂಬುದಕ್ಕೆ ಈ ಗಾದೆ ಅತ್ಯಂತ ಸರಳ ಹಾಗೂ ಸ್ಪಷ್ಟವಾದ ಸೂತ್ರವನ್ನು ಒದಗಿಸುತ್ತವೆ. ಶ್ರೀರಾಮ ಹೇಗೆ ಬದುಕಿದನೋ ಅದನ್ನು ನೋಡಿ, ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಏನು ಹೇಳಿದನೋ ಅದನ್ನು ಕೇಳಿ ನಾವು ಬದುಕುವುದನ್ನು ಕಲಿಯುತ್ತೇವೆ. ಇವರಿಬ್ಬರ ಸಮನ್ವಯವೇ ಸನಾತನ ಧರ್ಮದ ಜೀವಾಳ.
ಇಂತಹ ತತ್ವದ ಹಿನ್ನೆಲೆಯಲ್ಲಿ, ರಾಮನ ಆದರ್ಶ ನಡವಳಿಕೆ ಹಾಗೂ ಕೃಷ್ಣನ ಗೀತೆಯ ತತ್ವಗಳನ್ನು ಸಮಾನ ದೃಷ್ಟಿಯಿಂದ ವಿಶ್ಲೇಷಿಸಿದಾಗ ಮಾತ್ರ ಜೀವನದ ಪೂರ್ಣಾರ್ಥ ನಮಗೆ ಅರ್ಥವಾಗುವ ಸಾಧ್ಯತೆಯಿರುತ್ತದೆ.
ಶ್ರೀರಾಮನ ನಡೆ: ಕರ್ತವ್ಯಪ್ರಜ್ಞೆ ಮತ್ತು ನಿಷ್ಕಾಮ ಕರ್ಮದ ಸಾಕಾರ
ಬಹುಶಃ ಆಧುನಿಕ ಜಗತ್ತಿನಲ್ಲಿ ನಾವು ಶ್ರೀರಾಮನ ನಡೆಯ ಹಿಂದಿನ ಗಾಂಭೀರ್ಯವನ್ನು ಸರಿಯಾಗಿ ಗ್ರಹಿಸಿಲ್ಲ. ರಾಮನ ತ್ಯಾಗ ಕೇವಲ ಪಟ್ಟಾಭಿಷೇಕವನ್ನು ನಿರಾಕರಿಸಿ, ಅರಮನೆಯನ್ನು ಬಿಡುವುದರಲ್ಲಷ್ಟೇ ಸೀಮಿತವಾಗಿರಲಿಲ್ಲ. ಸರ್ವಸ್ವವನ್ನೂ ತೊರೆದು ಕಾಡಿಗೆ ನಡೆದ ಆತ ತನ್ನ ಧನುರ್ಬಾಣಗಳನ್ನು ಮಾತ್ರ ಎಂದಿಗೂ ಬಿಡಲಿಲ್ಲ. ಆತ ಸದಾ ಶರಚಾಪಧರನಾಗಿಯೇ ನಡೆದ… ಬಿಲ್ಲು-ಬಾಣಗಳಿಲ್ಲದ ರಾಮನ ಚಿತ್ರವನ್ನು ಕಲ್ಪಿಸಿಕೊಳ್ಳುವುದು ಸಾಧ್ಯವೇ?
ಇದರ ತಾತ್ಪರ್ಯವೇನು? ಅಧಿಕಾರವನ್ನು, ಸುಖ-ಭೋಗಗಳನ್ನು ತ್ಯಜಿಸಿದರೂ, ಕ್ಷತ್ರಿಯನಾಗಿ ‘ಧರ್ಮರಕ್ಷಣೆ’ಯ ಜವಾಬ್ದಾರಿಯನ್ನು ಆತ ಎಂದಿಗೂ ಕೈಬಿಡಲಿಲ್ಲ. ರಾವಣನಂತಹ ಮಹಾಶಕ್ತಿಶಾಲಿಯನ್ನು ವಧಿಸುವಾಗಲೂ ರಾಮನ ಕಣ್ಣುಗಳಲ್ಲಿ ಕೋಪದ ಕಿಡಿಯಿರಲಿಲ್ಲ, ದ್ವೇಷದ ಜ್ವಾಲೆಯೂ ಇರಲಿಲ್ಲ. ಅಲ್ಲಿ ಕೇವಲ ‘ಕರ್ತವ್ಯಪ್ರಜ್ಞೆಯ ದೃಢತೆ’ ಮತ್ತು ‘ಧರ್ಮರಕ್ಷಣೆಯ ಭಾದ್ಯತೆ’ ಮಾತ್ರ ಮೇಳೈಸಿತ್ತು. ತನ್ನ ವೈಯಕ್ತಿಕ ರೋಷದಿಂದಾಗಲಿ ಅಥವಾ ಸೇಡಿನಿಂದಾಗಲಿ ಆತ ಯುದ್ಧ ಮಾಡಲಿಲ್ಲ, ಕೇವಲ ಲೋಕಕಂಟಕನಾದ ಅಧರ್ಮಿಯನ್ನು ಶಿಕ್ಷಿಸುವ ತನ್ನ ಜವಾಬ್ದಾರಿಯನ್ನು ನಿರ್ವಹಿಸಿದನಷ್ಟೇ. ಆತನ ಪ್ರತಿಯೊಂದು ಹೆಜ್ಜೆಯೂ ‘ನಿಷ್ಕಾಮ ಕರ್ಮ’ದ (ಫಲಾಪೇಕ್ಷೆಯಿಲ್ಲದ ಕಾರ್ಯ) ಜೀವಂತ ಉದಾಹರಣೆಯಾಗಿತ್ತು.
ಶ್ರೀಕೃಷ್ಣನ ನುಡಿ: ಗೀತೆಯ ಜ್ಞಾನಾಮೃತದಲ್ಲಿ ರಾಮತತ್ವದ ಪ್ರತಿಬಿಂಬ
ತ್ರೇತಾಯುಗದಲ್ಲಿ ರಾಮ ಏನನ್ನು ತನ್ನ ನಡೆಯ ಮೂಲಕ ಆಚರಿಸಿ ತೋರಿಸಿದನೋ, ಅದನ್ನೇ ದ್ವಾಪರಯುಗದಲ್ಲಿ ಶ್ರೀಕೃಷ್ಣ ಭಗವದ್ಗೀತೆಯ ಮೂಲಕ ನುಡಿದ. ಯುದ್ಧಭೂಮಿಯಲ್ಲಿ ಕರ್ತವ್ಯವಿಮುಖನಾದ ಅರ್ಜುನನಿಗೆ ಕೃಷ್ಣ ಬೋಧಿಸಿದ ಮೂಲತತ್ವವೇ ಗೀತೆಯಲ್ಲವೇ?
ರಾವಣನನ್ನು ಕೊಂದಾಗ ರಾಮನಲ್ಲಿದ್ದ ನಿರ್ಲಿಪ್ತ ಭಾವವನ್ನೇ ಕೃಷ್ಣ ಗೀತೆಯಲ್ಲಿ ವಿವರಿಸುತ್ತಾನೆ. ದ್ವೇಷ, ಕೋಪ, ಮತ್ತು ಅಹಂಕಾರಗಳನ್ನು ಬದಿಗಿಟ್ಟು ಕೇವಲ ಧರ್ಮಸಂಸ್ಥಾಪನೆಗಾಗಿ ಹೋರಾಡಬೇಕೆಂಬ ಕೃಷ್ಣನ ನುಡಿ, ರಾಮನ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ (ಕರ್ಮ ಮಾಡುವುದರಲ್ಲಷ್ಟೇ ನಿನಗೆ ಅಧಿಕಾರ, ಫಲದ ಮೇಲಲ್ಲ) ಎಂಬ ಕೃಷ್ಣನ ನುಡಿಯನ್ನು ರಾಮ ಅದಾಗಲೇ ಬದುಕಿ ತೋರಿಸಿ ಆಗಿತ್ತು. ಅಂದರೆ, ಕೃಷ್ಣನ ಮಾತುಗಳು ಬದುಕಿನ ತತ್ವಶಾಸ್ತ್ರವಾದರೆ, ರಾಮನ ಜೀವನ ಆ ತತ್ವಶಾಸ್ತ್ರದ ಪ್ರಾಯೋಗಿಕ ರೂಪವಾಗಿತ್ತು.
ಶ್ರೀಕೃಷ್ಣನ ನಡೆಯೂ ಆದರ್ಶವೇ: ಒಂದು ವಿವೇಚನೆ
ಇಲ್ಲಿ ಒಂದು ಪ್ರಮುಖ ವಿಚಾರವನ್ನು ನಾವು ಅರಿಯಲೇಬೇಕು. “ರಾಮನ ನಡೆ, ಕೃಷ್ಣನ ನುಡಿ” ಎಂದಾಕ್ಷಣ ಕೃಷ್ಣನ ನಡೆಯನ್ನು ನಾವು ಅನುಸರಿಸಬಾರದು ಎಂದರ್ಥವಲ್ಲ. ರಾಮನ ಮಾರ್ಗವು ನೇರವಾದ, ನಿಯಮಬದ್ಧವಾದ ಆದರ್ಶ ಧರ್ಮ. ಇದು ಸಾರ್ವಕಾಲಿಕವಾಗಿ ಪ್ರತಿಯೊಬ್ಬರಿಗೂ ಸುಲಭವಾಗಿ ಅರ್ಥವಾಗುವಂತಹ ಶಿಸ್ತುಬದ್ಧ ಹಾದಿ.
ಆದರೆ ಶ್ರೀಕೃಷ್ಣನ ನಡೆ ಅತ್ಯಂತ ಸಂಕೀರ್ಣವಾದದ್ದು (complex) ಹಾಗೂ ಆಳವಾದದ್ದು. ಧರ್ಮವು ಅತಿರೇಕದ ಬಿಕ್ಕಟ್ಟಿಗೆ ಸಿಲುಕಿದಾಗ, ಅದನ್ನು ರಕ್ಷಿಸಲು ಕೃಷ್ಣನು ತಂತ್ರ, ರಾಜತಾಂತ್ರಿಕತೆ ಮತ್ತು ಪ್ರಾಯೋಗಿಕತೆಯ ಮೊರೆಹೋದ. ಕೃಷ್ಣನ ಪ್ರತಿಯೊಂದು ನಡೆಯೂ ಲೋಕಕಲ್ಯಾಣದ ಪರಮೋದ್ದೇಶವನ್ನೇ ಹೊಂದಿದ್ದರೂ, ಅದರ ಹಿಂದಿನ ಧರ್ಮಸೂಕ್ಷ್ಮಗಳನ್ನು ಸಾಮಾನ್ಯರು ಮೇಲ್ನೋಟಕ್ಕೆ ಗ್ರಹಿಸುವುದು ಕಷ್ಟ. ಕೃಷ್ಣನ ಬದುಕು ನಮಗೆ ಬಿಕ್ಕಟ್ಟಿನ ಸಮಯದಲ್ಲಿ ಬದುಕಬೇಕಾದ ಚಾಣಾಕ್ಷತೆ, ಹೊಂದಾಣಿಕೆ ಮತ್ತು ಛಲವನ್ನು ಕಲಿಸುತ್ತದೆ. ಹೀಗಾಗಿ ಕೃಷ್ಣನ ನಡೆಯೂ ಅನುಕರಣೀಯವೇ… ಆದರೆ ಆತನ ಕಾರ್ಯಗಳ ಹಿಂದಿರುವ ಗೀತೆಯ ಜ್ಞಾನದ ಅರಿವು ನಮಗಿದ್ದರೆ ಮಾತ್ರ ಆತನ ನಡೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯ.
ಉಪಸಂಹಾರ
ಶ್ರೀರಾಮ ಮತ್ತು ಶ್ರೀಕೃಷ್ಣರಿಬ್ಬರೂ ಧರ್ಮವೆಂಬ ಒಂದೇ ನಾಣ್ಯದ ಎರಡು ಮುಖಗಳು. ರಾಮನು ತಾನು ನಡೆದ ದಾರಿಯ ಮೂಲಕ ಗೀತೆಯನ್ನು ಬರೆದರೆ, ಕೃಷ್ಣನು ತಾನು ನುಡಿದ ಗೀತೆಯ ಮೂಲಕ ಬದುಕಿನ ದಾರಿಯನ್ನು ತೋರಿದ. ಜೊತೆಗೆ ತನ್ನ ನಡೆಯ ಮೂಲಕ ಕಷ್ಟಕಾಲದಲ್ಲಿ ಧರ್ಮವನ್ನು ಹೇಗೆ ಎತ್ತಿಹಿಡಿಯಬೇಕೆಂಬುದನ್ನೂ ಕಲಿಸಿದ.
ರಾಮನ ಆದರ್ಶ ನಡವಳಿಕೆಯಿಂದ ಬದುಕಿನ ಶಿಸ್ತನ್ನು, ಮತ್ತು ಕೃಷ್ಣನ ಗೀತೆಯ ಜ್ಞಾನದಿಂದ ಬದುಕಿನ ವಿವೇಕವನ್ನು ಅಳವಡಿಸಿಕೊಂಡರೆ ಮನುಷ್ಯನ ಜೀವನ ಸಾರ್ಥಕವಾಗುತ್ತದೆ.