“ಅಜ್ಜಾ,” ಎಂದಳು ಮಾಯಾ.
ಎಂಟು ವರ್ಷದ ಆಕೆಗೆ ಏನಾದರೂ ಗೊಂದಲವಾದರೆ ಸಾಕು, ಅಜ್ಜನಂತೆಯೇ ಆಕಾಶವನ್ನು ದಿಟ್ಟಿಸುವ ಅಭ್ಯಾಸ. ಪಶ್ಚಿಮದ ಆಗಸದಲ್ಲಿ ಸೂರ್ಯ ಕೆಂಪಗೆ ಉರಿಯುತ್ತಾ ಕರಗುತ್ತಿದ್ದ.
“ದೇವರಿಗೆ ಯಾವ ಭಾಷೆಯೆಂದರೆ ತುಂಬಾ ಇಷ್ಟ?”
ಅಜ್ಜ ತಕ್ಷಣವೇ ಉತ್ತರಿಸಲಿಲ್ಲ. “ಯಾಕೆ ಹಾಗೆ ಕೇಳ್ತಿದ್ದೀಯಾ ಚಿನ್ನು?”
“ನನ್ನ ಕ್ಲಾಸಿನಲ್ಲಿ ಜಾನ್ ಇಂಗ್ಲಿಷ್‌ನಲ್ಲಿ ಪ್ರಾರ್ಥನೆ ಮಾಡ್ತಾನೆ. ನಾವು ಸಂಸ್ಕೃತದಲ್ಲಿ ಶ್ಲೋಕ ಹೇಳ್ತೀವಿ. ಜ಼ರಾ ಅರಾಬಿಕ್‌ನಲ್ಲಿ ನಮಾಜ್ ಮಾಡ್ತಾಳೆ.” ಅವಳು ದೂರದ ದಿಗಂತವನ್ನು ನೋಡುತ್ತಲೇ ಕೇಳಿದಳು, “ಅಂದರೆ, ನಮ್ಮೆಲ್ಲರಿಗೂ ಬೇರೆ ಬೇರೆ ದೇವರುಗಳಿದ್ದಾರಾ? ಒಬ್ಬೊಬ್ಬರಿಗೆ ಒಬ್ಬೊಬ್ಬ ದೇವರಾ?”
ಅಜ್ಜ ಅವಳ ಹೆಗಲ ಮೇಲೆ ಕೈಯಿಟ್ಟರು. ಬೆಚ್ಚಗಿನ, ಭರವಸೆಯ ಸ್ಪರ್ಶ.
“ಆ ಸೂರ್ಯನನ್ನು ನೋಡು ಮಾಯಾ. ಈಗೇನು ಮಾಡ್ತಿದ್ದಾನೆ?”
“ಮುಳುಗುತ್ತಿದ್ದಾನೆ.”
“ಅವನು ನಮಗೋಸ್ಕರ ಮಾತ್ರ ಮುಳುಗುತ್ತಿದ್ದಾನಾ?”
ಅವಳು ಸ್ವಲ್ಪ ಯೋಚಿಸಿ, “ಇಲ್ಲ. ಇಲ್ಲಿರುವ ಎಲ್ಲರಿಗೂ… ಜ಼ರಾಗೆ, ಜಾನ್‌ಗೆ, ಎಲ್ಲರಿಗೂ ಮುಳುಗುತ್ತಿದ್ದಾನೆ.”
“ಹೌದು, ಅದೇ ಸೂರ್ಯ,” ಅಜ್ಜ ಮೆಲ್ಲನೆ ನಕ್ಕರು. ಸ್ವಲ್ಪ ಹೊತ್ತು ತಡೆದು, “ಏಕಂ ಸತ್, ವಿಪ್ರಾ ಬಹುಧಾ ವದಂತಿ.”
ಮಾಯಾ ಅಜ್ಜನ ಮುಖ ನೋಡಿದಳು. “ಅಂದರೇನು ಅಜ್ಜಾ?”
“ಇದು ಋಗ್ವೇದದ ಸಾಲು ಚಿನ್ನು. ಬಹಳ ಹಳೆಯದು, ಬಹಳ ಆಳವಾದದ್ದು. ಇದರ ಅರ್ಥ…” ಅಜ್ಜ ತಮಗೆ ಅಭ್ಯಾಸವಾದಂತೆ ಪದಗಳನ್ನು ಆರಿಸಿಕೊಳ್ಳುತ್ತಾ ತಲೆಬಾಗಿಸಿದರು, “ಸತ್ಯ ಒಂದೇ. ಆದರೆ ತಿಳಿದವರು ಅದನ್ನು ಹಲವು ರೀತಿಗಳಲ್ಲಿ ವರ್ಣಿಸುತ್ತಾರೆ.”
“ಅಂದರೆ, ಸತ್ಯ ಅಂದರೆ ದೇವರಾ?”
“ಹೌದು. ದೇವರು ಒಬ್ಬನೇ. ನಾವೆಲ್ಲರೂ ನಮ್ಮ ನಮ್ಮ ಭಾಷೆಯಲ್ಲಿ ಆ ಒಬ್ಬನನ್ನೇ ವಿವರಿಸಲು ಪ್ರಯತ್ನಿಸುತ್ತಿದ್ದೇವೆ.”
ಅವಳು ಇದನ್ನು ತಲೆಯಲ್ಲಿ ಮೆಲುಕು ಹಾಕಿದಳು. ಒಮ್ಮೆ ತಲೆಯಾಡಿಸಿದಳು. ಆದರೆ ಆ ಸಮಾಧಾನ ಕ್ಷಣಿಕವಾಗಿತ್ತು. ಮತ್ತೆ ಅವಳ ಹಣೆಯ ಮೇಲೆ ನೆರಿಗೆ ಮೂಡಿತು.
“ಆದರೆ ಅಜ್ಜಾ, ದೇವರು ಒಬ್ಬನೇ ಆಗಿದ್ದರೆ, ನಮಗ್ಯಾಕೆ ಇಷ್ಟು ಜನ ದೇವರುಗಳಿದ್ದಾರೆ? ಗಣೇಶ, ವಿಷ್ಣು, ಶಿವ, ಸರಸ್ವತಿ…”
“ಹೌದು,” ಅಜ್ಜ ಈಗ ನಗುತ್ತಿದ್ದರು.
“ಅದು ಒಬ್ಬನಲ್ಲ, ಬಹಳ ಜನ ಆದರಲ್ಲ!”
ಅಜ್ಜ ಮೆಲ್ಲಗೆ ನಕ್ಕರು. “ನಿಜ, ನೋಡಲು ಹಾಗೆಯೇ ಕಾಣುತ್ತದೆ.”
…
ಬೆಟ್ಟದ ಹಿಂದಕ್ಕೆ ಇಳಿಯುತ್ತಿದ್ದ ಸೂರ್ಯನನ್ನು ನೋಡುತ್ತಲೇ ಅಜ್ಜ ಕೇಳಿದರು, “ಒಂದು ಮಾತು ಹೇಳು. ನಿಮ್ಮ ಸ್ಕೂಲಿನ ಪ್ರಿನ್ಸಿಪಾಲ್ ಅವರನ್ನು ನೀನೇನು ಅಂತ ಕರೀತೀಯಾ?”
“ಮ್ಯಾಡಮ್.”
“ಮನೆಯಲ್ಲಿ ಅವರನ್ನೇನು ಅಂತ ಕರೀತಾರೆ?”
“ಅವರು ಮಿಸಸ್ ಕುಮಾರಿ. ಅವರ ಗಂಡ ಬಹುಶಃ ಸುನೀತಾ ಅಂತ ಕರೀಬಹುದು.”
“ಮತ್ತೆ ಅವರ ಮಕ್ಕಳು?”
“ಅಮ್ಮ ಅಂತ.”
“ಹಾಗಾದರೆ, ಅವರೆಲ್ಲರೂ ಬೇರೆ ಬೇರೆ ಜನನಾ?”
ಮಾಯಾಳ ಮುಖದಲ್ಲಿದ್ದ ಗೊಂದಲ ನಿಧಾನವಾಗಿ ಕರಗಿತು. “ಇಲ್ಲ. ಅವರು ಒಬ್ಬರೇ. ಆದ್ರೆ… ಬೇರೆ ಬೇರೆ ಜನ ಬೇರೆ ಬೇರೆಯಾಗಿ ಕರೀತಾರೆ ಅಷ್ಟೆ.”
“ಸರಿಯಾಗಿ ಹೇಳಿದೆ! ನೋಡು, ನಮ್ಮ ಊಹೆಗೂ ನಿಲುಕದಷ್ಟು ಬೃಹತ್ತಾದದ್ದು ದೇವರು. ಹಾಗಾಗಿ ನಮ್ಮ ಪೂರ್ವಜರು ಬಹಳ ಸಹಜವಾದ ಒಂದು ಕೆಲಸ ಮಾಡಿದರು. ದೇವರ ಕೆಲಸಗಳನ್ನು, ಗುಣಗಳನ್ನು ನೋಡಿ, ಪ್ರತಿಯೊಂದು ಗುಣಕ್ಕೂ ಒಂದು ಹೆಸರು ಕೊಟ್ಟರು. ಒಂದು ಮುಖ, ಒಂದು ಕಥೆ ಕೊಟ್ಟರು.” ಅಜ್ಜ ವಿವರಿಸತೊಡಗಿದರು, “ಹೊಸ ಕೆಲಸದ ಆರಂಭಕ್ಕೆ ಗಣೇಶ, ವಿದ್ಯೆಗೆ ಸರಸ್ವತಿ, ಹಲವು ರೀತಿಯ ಸಂಪತ್ತುಗಳಿಗೆ ಲಕ್ಷ್ಮಿ, ಜಗತ್ತಿನ ಪಾಲನೆಗೆ ವಿಷ್ಣು, ಮತ್ತು ಲಯಕ್ಕೆ ಶಿವ.”
“ಅಂದ್ರೆ… ಬೇರೆ ಬೇರೆ ಡಿಪಾರ್ಟ್‌ಮೆಂಟ್ ಇದ್ದ ಹಾಗಾ?” ಮಾಯಾ ಕೇಳಿದಳು.
ಅಜ್ಜ ಜೋರಾಗಿ ನಕ್ಕರು. “ಹೌದು ಚಿನ್ನು. ಬೇರೆ ಬೇರೆ ಡಿಪಾರ್ಟ್‌ಮೆಂಟ್ ಇದ್ದ ಹಾಗೆಯೇ. ಆದರೆ ಎಲ್ಲವೂ ಇರುವುದು ಒಂದೇ ಆಫೀಸಿನಲ್ಲಿ.”
ಅವಳು ಕಿಲಕಿಲ ನಕ್ಕಳು. ಮತ್ತೆ ಗಂಭೀರವಾಗಿ, “ಮತ್ತೆ ಜ಼ರಾಳ ದೇವರು?”
“ಅದೇ ಆಫೀಸು,” ಅಜ್ಜ ಸರಳವಾಗಿ ಹೇಳಿದರು. “ಅಲ್ಲಿ ಡಿಪಾರ್ಟ್‌ಮೆಂಟ್ಸ್ ಇಲ್ಲ. ಎಲ್ಲವೂ ಒಂದೇ. ಆ ಬೃಹತ್ತಾದ ಶಕ್ತಿಯನ್ನು ವಿವರಿಸುವ ಅವರ ರೀತಿ ಅದು. ಒಂದೇ ಹೆಸರು. ವಿಭಜಿಸಲಾಗದ, ವರ್ಣಿಸಲಾಗದ ಶಕ್ತಿ.”
“ಮತ್ತೆ ಜಾನ್‌ನ ದೇವರು?”
“ಅದೂ ಕೂಡ ಅದೇ. ಅವರು ದೇವರನ್ನು ಫಾದರ್, ಸನ್ ಮತ್ತು ಸ್ಪಿರಿಟ್ ಅಂತ ಮೂರು ರೂಪದಲ್ಲಿ ನೋಡಿದರೂ, ಎಲ್ಲವೂ ಸೇರಿ ಒಬ್ಬನೇ ಎನ್ನುತ್ತಾರೆ. ಅಷ್ಟು ದೊಡ್ಡ ಶಕ್ತಿಯನ್ನು ವಿವರಿಸಲು ಅವರು ಕಂಡುಕೊಂಡ ದಾರಿ ಅದು.”
ಮಾಯಾ ಬಹಳ ಹೊತ್ತು ಆಕಾಶವನ್ನೇ ನೋಡುತ್ತಿದ್ದಳು.
“ಹಾಗಾದ್ರೆ ಯಾರೂ ತಪ್ಪು ಹೇಳ್ತಿಲ್ಲ,” ಕೊನೆಗೂ ಅವಳ ಬಾಯಿಂದ ಈ ಮಾತು ಬಂತು. “ಎಲ್ಲರೂ ಒಂದೇ ಚಿತ್ರ ಬಿಡಿಸುತ್ತಿದ್ದಾರೆ. ಆದರೆ ಬೇರೆ ಬೇರೆ ಕ್ರೆಯಾನ್ಸ್ (ಬಣ್ಣಗಳು) ಬಳಸಿ, ಅಷ್ಟೇ.”
ಅಜ್ಜ ಅವಳನ್ನೇ ಅಚ್ಚರಿಯಿಂದ ನೋಡಿದರು. ಎಂಟು ವರ್ಷದ ಮಗುವೊಂದು ತತ್ವಜ್ಞಾನಿಯೊಬ್ಬರು ಪುಟಗಟ್ಟಲೆ ಬರೆದು ವಿವರಿಸಬೇಕಾದ ಸತ್ಯವನ್ನು ಒಂದೇ ವಾಕ್ಯದಲ್ಲಿ ಹೇಳಿಬಿಟ್ಟಿತ್ತು.
“ಬೇರೆ ಬೇರೆ ಕ್ರೆಯಾನ್ಸ್,” ಅಜ್ಜ ಮೆಲುಕು ಹಾಕಿದರು. “ನಾನು ಇದನ್ನು ಯಾವತ್ತೂ ನೆನಪಿಟ್ಟುಕೊಳ್ಳುತ್ತೇನೆ ಚಿನ್ನು.”
…
ಮಾಯಾಗೆ ಖುಷಿಯಾಯಿತು. ತಕ್ಷಣವೇ ಅವಳು, “ಜಾನ್ ಆ ಸತ್ಯವನ್ನು ‘ಗಾಡ್’ ಅಂತ ಕರೀತಾನೆ. ನಾವದನ್ನ ಏನಂತ ಕರೀತೀವಿ ಅಜ್ಜಾ?”
ಅಜ್ಜ ಕ್ಷಣಕಾಲ ಸುಮ್ಮನಾದರು. ಅವರಿಗೆ ಉತ್ತರ ಗೊತ್ತಿರಲಿಲ್ಲ ಎಂದಲ್ಲ. ಎಂಟು ವರ್ಷದ ಮಗುವಿಗೆ ಅರ್ಥವಾಗುವಂತಹ ಸರಿಯಾದ ಪದಗಳನ್ನು ಹುಡುಕುತ್ತಿದ್ದರು.
“ನಾವು ಅದನ್ನು ‘ಬ್ರಹ್ಮನ್’ ಅಂತ ಕರೀತೀವಿ. ಅದೇ ಎಲ್ಲದಕ್ಕೂ ಮೂಲ.”1
ಮಾಯಾಳ ಹುಬ್ಬು ಮೇಲೇರಿತು. “ಬ್ರಾಹ್ಮಣ ಇದ್ದ ಹಾಗಾ?”
“ಕೇಳಲು ಹಾಗೇ ಅನ್ನಿಸಿದರೂ, ಎರಡೂ ಬೇರೆ. ಬ್ರಾಹ್ಮಣ ಅನ್ನೋದು ಒಂದು ಸಮುದಾಯದ ಹೆಸರು. ಆದರೆ ಬ್ರಹ್ಮನ್ ಎನ್ನುವ ಪದ ಸಂಸ್ಕೃತದ ಒಂದು ಮೂಲ ಧಾತುವಿನಿಂದ ಬಂದಿದೆ. ಅದರ ಅರ್ಥ- ವಿಸ್ತರಿಸುವುದು. ಯಾವುದೇ ಮಿತಿಯಿಲ್ಲದೆ, ಎಲ್ಲಾ ದಿಕ್ಕುಗಳಿಗೂ, ಶಾಶ್ವತವಾಗಿ ಬೆಳೆಯುವುದು.” ಸಂಜೆಯ ಗಾಳಿಗೆ ಏನನ್ನೋ ಬಿಡುಗಡೆ ಮಾಡುತ್ತಿರುವಂತೆ ಅಜ್ಜ ನಿಧಾನವಾಗಿ ತಮ್ಮ ಕೈಗಳನ್ನು ತೆರೆದರು. “ಅದು ಒಬ್ಬ ವ್ಯಕ್ತಿಯಲ್ಲ. ಎಲ್ಲೋ ಸಿಂಹಾಸನದ ಮೇಲೆ ಕುಳಿತಿರುವ ರಾಜನಲ್ಲ. ಅಸ್ತಿತ್ವದಲ್ಲಿರುವ ಪ್ರತಿಯೊಂದರ ಅಡಿಪಾಯವೇ ಅದು.”
“ಅಂದ್ರೇನು?”
“ಅದು ಸೂರ್ಯನಲ್ಲಿದೆ. ಮಣ್ಣಿನಲ್ಲಿದೆ. ನಿನ್ನಲ್ಲಿದೆ. ನಿನ್ನ ಸ್ನೇಹಿತರಲ್ಲಿದೆ. ನಕ್ಷತ್ರಗಳಲ್ಲಿದೆ ಮತ್ತು ನಕ್ಷತ್ರಗಳ ನಡುವಿನ ಖಾಲಿ ಜಾಗದಲ್ಲೂ ಇದೆ.”
ಮಾಯಾ ತನ್ನ ಕೈಗಳನ್ನೇ ನೋಡಿಕೊಂಡಳು. “ಹಾಗಾದ್ರೆ ಅದು ನಮ್ಮ ಹೊರಗಡೆ ಇಲ್ಲವಾ?”
“ಅದು ಹೊರಗಡೆಯೂ ಇದೆ, ಒಳಗಡೆಯೂ ಇದೆ. ಎರಡೂ ಕಡೆ ಒಟ್ಟಿಗೇ ಇದೆ.” ಅವಳ ಮುಖಭಾವ ನೋಡಿ ಅಜ್ಜ ನಕ್ಕರು. “ಗೊತ್ತು, ಇದು ಅರ್ಥ ಮಾಡಿಕೊಳ್ಳಲು ಸ್ವಲ್ಪ ಕಷ್ಟ.”
“ತುಂಬಾನೇ ಕಷ್ಟ,” ಅವಳು ಗಂಭೀರವಾಗಿ ಹೇಳಿದಳು.
…
ಈ ಭೂಮಿ ಹುಟ್ಟುವ ಮುನ್ನ, ಮೊದಲ ಸಮುದ್ರ ಸೃಷ್ಟಿಯಾಗುವ ಮುನ್ನ, ಅಥವಾ ಜೀವರಾಶಿ ಮೊದಲ ಉಸಿರೆಳೆಯುವ ಮುನ್ನ, ಯಾವುದೋ ಒಂದು ಶಕ್ತಿ ಇದೆಲ್ಲದಕ್ಕೂ ಚಾಲನೆ ನೀಡಿತು. ಆ ಮೊದಲ ಕಿಡಿ, ಆ ಮೊದಲ ಕಾರಣ, ಈ ಬ್ರಹ್ಮಾಂಡ ಇರಬೇಕು ಎಂದು ನಿರ್ಧರಿಸಿದ ಆ ಶಕ್ತಿಯನ್ನೇ ಇತಿಹಾಸದುದ್ದಕ್ಕೂ ಬಹುತೇಕ ಮನುಷ್ಯರು ದೇವರು ಎಂದು ಕರೆದಿದ್ದಾರೆ.
ಮೂಲ ಇರುವುದು ಒಂದೇ. ಹಲವು ಅಲ್ಲ.
ಕಗ್ಗತ್ತಲ ಮಣ್ಣಿನೊಳಗಿರುವ ಬೀಜವನ್ನು ಒಡೆದು ಮೊಳಕೆಯೊಡೆಯುವಂತೆ ಮಾಡುವ ಶಕ್ತಿಗೂ, ಗ್ಯಾಲಕ್ಸಿಗಳನ್ನು ಅವುಗಳ ಕಕ್ಷೆಯಲ್ಲಿ ಹಿಡಿದಿಟ್ಟುಕೊಂಡು ತಿರುಗುವಂತೆ ಮಾಡುವ ಶಕ್ತಿಗೂ ವ್ಯತ್ಯಾಸವಿಲ್ಲ. ಇದೇನೂ ಕಾವ್ಯದ ಸಾಲುಗಳಲ್ಲ. ಒಂದು ರೀತಿಯಲ್ಲಿ, ಇದು ಜಗತ್ತಿನ ಅತ್ಯಂತ ತಾರ್ಕಿಕವಾದ ವಿಷಯ. ಎರಡು ಬೇರೆ ಬೇರೆ ಮೂಲಗಳು ಇರಲು ಸಾಧ್ಯವೇ ಇಲ್ಲ. ಯಾವುದಾದರೂ ಒಂದು ನಿಜವಾದ ಆರಂಭ ಎಂದಾದರೆ, ಅದು ಒಂದೇ ಆಗಿರಬೇಕು.
…
ಆದರೂ ಒಮ್ಮೆ ಸುತ್ತಮುತ್ತ ಕಣ್ಣು ಹಾಯಿಸಿ ನೋಡಿ. ಹತ್ತಾರು ಧರ್ಮಗಳು. ನೂರಾರು ಪವಿತ್ರ ಗ್ರಂಥಗಳು. ಒಂದೇ ಆಕಾಶದ ಕಡೆಗೆ ಏಕಕಾಲದಲ್ಲಿ ಹೊರಡುವ ಸಾವಿರಾರು ಬೇರೆ ಬೇರೆ ಪ್ರಾರ್ಥನೆಗಳು. ಮತ್ತು ಕೆಲವೊಮ್ಮೆ, ದೇವರ ಬಗ್ಗೆ ತಮಗಿರುವ ಹೆಸರೇ ಸರಿಯಾದದ್ದು ಎಂದು ಪರಸ್ಪರ ಕಚ್ಚಾಡುವ ಮನುಷ್ಯರು.
ನಾವು ಇಲ್ಲಿಗೆ ಬಂದು ತಲುಪಿದ್ದು ಹೇಗೆ?
…
ಉತ್ತರ ಬಹಳ ಸರಳವಾಗಿದೆ. ಧರ್ಮ ಎನ್ನುವುದು ಭಾಷೆಯಿದ್ದಂತೆ.
ನಮ್ಮ ಸೂರ್ಯನನ್ನೇ ತೆಗೆದುಕೊಳ್ಳಿ. ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬ ಮನುಷ್ಯನೂ ಅದೇ ಸೂರ್ಯನ ಬಿಸಿಯನ್ನು ಮುಖದ ಮೇಲೆ ಅನುಭವಿಸಿದ್ದಾನೆ. ಅದೇ ನಕ್ಷತ್ರ, ಅದೇ ಬೆಳಕು. ಆದರೆ ನಮ್ಮ ಪೂರ್ವಜರು ಜಗತ್ತಿನ ಬೇರೆ ಬೇರೆ ಮೂಲೆಗಳಲ್ಲಿ ಬದುಕಿದ್ದರಿಂದ, ಬೇರೆ ಬೇರೆ ಭಾಷೆಗಳನ್ನು ಮಾತನಾಡಿದ್ದರಿಂದ ಮತ್ತು ಬೇರೆ ಬೇರೆ ಸಂಸ್ಕೃತಿಗಳನ್ನು ಕಟ್ಟಿಕೊಂಡಿದ್ದರಿಂದ, ಅವರೆಲ್ಲರೂ ಸೂರ್ಯನಿಗೆ ತಮ್ಮದೇ ಆದ ಹೆಸರುಗಳನ್ನು ಇಟ್ಟುಕೊಂಡರು.
ನೂರಾರು ಭಾಷೆಗಳಲ್ಲಿ ನಮ್ಮ ಸೂರ್ಯನಿಗಿರುವ ಹೆಸರುಗಳಲ್ಲಿ ಕೇವಲ ಹನ್ನೆರಡು ಉದಾಹರಣೆಗಳನ್ನು ನೋಡಿ:
- ಇಂಗ್ಲಿಷ್: Sun
- ಸಂಸ್ಕೃತ: ಆದಿತ್ಯ (आदित्य)
- ಕನ್ನಡ: ಸೂರ್ಯ
- ತಮಿಳು: ಸೂರಿಯನ್ (சூரியன்)
- ಅರೇಬಿಕ್: ಶಮ್ಸ್ (شمس)
- ಮ್ಯಾಂಡರಿನ್ ಚೈನೀಸ್: ತೈಯಾಂಗ್ (太阳)
- ಜಾಪನೀಸ್: ತೈಯೊ (太陽)
- ಸ್ಪ್ಯಾನಿಷ್: Sol
- ಗ್ರೀಕ್: ಹೆಲಿಯೋಸ್ (Ήλιος)
- ಸ್ವಾಹಿಲಿ: ಜುವಾ (Jua)
- ಕ್ವೆಚುವಾ (ದಕ್ಷಿಣ ಅಮೇರಿಕಾ): ಇಂಟಿ (Inti)
- ಪ್ರಾಚೀನ ಈಜಿಪ್ಟಿಯನ್: ರಾ
ಹನ್ನೆರಡು ಪದಗಳು. ಹನ್ನೆರಡು ಲಿಪಿಗಳು. ಹನ್ನೆರಡು ಭಾಷೆಗಳು. ಆದರೆ ಸೂರ್ಯ ಒಂದೇ.
ಸ್ಪ್ಯಾನಿಷ್ ಭಾಷೆಯ ‘Sol’ ಗೂ ಕನ್ನಡದ ‘ಸೂರ್ಯ’ನಿಗೂ ವ್ಯತ್ಯಾಸವಿದೆ ಎಂದು ಯಾರೂ ವಾದಿಸುವುದಿಲ್ಲ. ಗಡಿ ದಾಟಿದ ತಕ್ಷಣಕ್ಕೋ ಅಥವಾ ಬೇರೆ ಭಾಷೆಯಲ್ಲಿ ಮಾತನಾಡಿದ ತಕ್ಷಣಕ್ಕೋ ಸೂರ್ಯ ಬೇರೆಯಾಗುವುದಿಲ್ಲ ಎನ್ನುವುದು ಯಾರಿಗೂ ಹೇಳಿಕೊಡದೆಯೇ ನಮಗೆ ಅರ್ಥವಾಗುತ್ತದೆ. ಪದ ಬದಲಾಗುತ್ತದೆಯೇ ಹೊರತು ವಸ್ತುವಲ್ಲ ಎನ್ನುವ ಸತ್ಯ ನಮಗೆ ಗೊತ್ತಿದೆ.
…
ಆದರೆ, ದೇವರ ವಿಚಾರಕ್ಕೆ ಬಂದಾಗ ಮಾತ್ರ ನಾವು ಇದನ್ನು ಸಂಪೂರ್ಣವಾಗಿ ಮರೆತುಬಿಡುತ್ತೇವೆ.
…
ಸಾವಿರಾರು ವರ್ಷಗಳ ಹಿಂದೆ, ಮನುಷ್ಯರು ಈ ಬ್ರಹ್ಮಾಂಡವನ್ನು ಅರ್ಥಮಾಡಿಕೊಳ್ಳಲು ಹೆಣಗಾಡುತ್ತಿದ್ದರು. ಅವರು ನಕ್ಷತ್ರಗಳನ್ನು, ಪ್ರವಾಹಗಳನ್ನು, ಬರಗಾಲಗಳನ್ನು ನೋಡಿದರು. ಹುಟ್ಟಿನ ವಿಸ್ಮಯವನ್ನು ಮತ್ತು ಸಾವಿನ ನಿಶ್ಯಬ್ದ ಅಂತಿಮತೆಯನ್ನು ದಿಟ್ಟಿಸಿದರು. ಹೀಗಾಗಿಯೇ ಅವರು ಧರ್ಮಗಳನ್ನು ಕಟ್ಟಿದರು. ತಮ್ಮನ್ನು ತಾವು ಒಡೆದುಕೊಳ್ಳುವುದಕ್ಕಲ್ಲ. ಬದಲಾಗಿ, ತಮಗೆ ಅನ್ನಿಸಿದ್ದನ್ನು ವಿವರಿಸಿಕೊಳ್ಳುವುದಕ್ಕೆ. ಯಾವುದೇ ಒಂದು ಹೆಸರಿನ ಚೌಕಟ್ಟಿಗೆ ಸಿಲುಕದಷ್ಟು ಬೃಹತ್ತಾದದ್ದಕ್ಕೆ ಹೆಸರುಗಳನ್ನು ನೀಡುವ ಪ್ರಯತ್ನವದು.
ಸಹಾರಾ ಮರುಭೂಮಿಯಲ್ಲಿ ಹುಟ್ಟಿದ ಮಗು ದೇವರನ್ನು ವಿವರಿಸುವ ರೀತಿಗೂ, ಹಿಮಾಲಯದಲ್ಲಿ ಹುಟ್ಟಿದ ಮಗು ವಿವರಿಸುವ ರೀತಿಗೂ ವ್ಯತ್ಯಾಸವಿರುತ್ತದೆ. ಅವರ ಊಟ ಬೇರೆ. ಅವರ ಸಂಗೀತ ಬೇರೆ. ಅವರು ನೋಡುವ ಆಕಾಶದ ಬಣ್ಣ ಬೇರೆ. ಸ್ವಾಭಾವಿಕವಾಗಿಯೇ, ಅವರ ಪ್ರಾರ್ಥನೆಗಳೂ ಬೇರೆಯಾಗಿಯೇ ಇರುತ್ತವೆ.
ಆದರೆ ಆ ಪ್ರಾರ್ಥನೆಯ ಹಿಂದಿರುವ ಭಾವನೆ? ಅದು ಎಲ್ಲರಲ್ಲೂ ಒಂದೇ. ದೇವಸ್ಥಾನದಲ್ಲಿ ಮಂಗಳಾರತಿಯ ಸಮಯದಲ್ಲಿ ಸಿಗುವ ಅದೇ ಮನಸ್ಸಿನ ಶಾಂತಿ, ಚರ್ಚ್‌ನ ಪ್ರಾರ್ಥನೆಯಲ್ಲೂ ಸಿಗುತ್ತದೆ. ಮಸೀದಿಯಲ್ಲಿ ನಮಾಜ್ ಮಾಡುವಾಗಲೂ ಸಿಗುತ್ತದೆ. ಮತ್ತು ಹಳೆಯ ಮರವೊಂದರ ಕೆಳಗೆ ಒಂಟಿಯಾಗಿ ಕುಳಿತಿರುವ ವ್ಯಕ್ತಿಗೂ ಅದೇ ಶಾಂತಿ ಸಿಗುತ್ತದೆ.
ಇದನ್ನೇ ಉಪನಿಷತ್ತುಗಳು ಸಾವಿರಾರು ವರ್ಷಗಳ ಹಿಂದೆಯೇ ಹೇಳಿದ್ದು: ‘ಏಕಂ ಸತ್, ವಿಪ್ರಾ ಬಹುಧಾ ವದಂತಿ.’ ಸತ್ಯ ಒಂದೇ, ತಿಳಿದವರು ಅದನ್ನು ಹಲವು ರೀತಿಗಳಲ್ಲಿ ವರ್ಣಿಸುತ್ತಾರೆ.
…
ನಾನು ಬಹಳಷ್ಟು ಜನರ ಸಾವಿನ ಮಂಚದ ಬಳಿ ಕುಳಿತಿದ್ದೇನೆ.
ಹಿಂದೂ ವೃದ್ಧೆಯೊಬ್ಬರ ಮಗಳು ಬಿಕ್ಕಳಿಸುತ್ತಲೇ ‘ವಿಷ್ಣು ಸಹಸ್ರನಾಮ’ ಪಠಿಸುತ್ತಿರುವುದನ್ನು ನೋಡಿದ್ದೇನೆ. ಮುಸ್ಲಿಂ ಅಜ್ಜಿಯೊಬ್ಬರ ಸುತ್ತಲೂ ನೆರೆದ ಕುಟುಂಬ ಉಸಿರಿನಷ್ಟೇ ಸಹಜವಾಗಿ ಪ್ರಾರ್ಥನೆ ಮಾಡುತ್ತಿರುವುದನ್ನು ಗಮನಿಸಿದ್ದೇನೆ. ಕ್ರಿಶ್ಚಿಯನ್ ವ್ಯಕ್ತಿಯೊಬ್ಬನ ಅಂಗೈಗೆ ಆತನ ಮಗಳು ಸಣ್ಣದೊಂದು ಶಿಲುಬೆಯನ್ನು ಇಡುವುದನ್ನು ನೋಡಿದ್ದೇನೆ.
ಅವರೆಲ್ಲರಿಗೂ ನಾನು ಅದೇ ವೈದ್ಯ. ನಾನು ಅದೇ ಕೈಯಿಂದ ಅವರ ನಾಡಿಮಿಡಿತವನ್ನು ಪರೀಕ್ಷಿಸುತ್ತೇನೆ. ಜೀವಲಕ್ಷಣಗಳು ನಿಧಾನವಾಗಿ, ಕೊನೆಗೆ ನಿಶ್ಯಬ್ದವಾಗುವುದನ್ನು ನೋಡುತ್ತೇನೆ. ತತ್ವಜ್ಞಾನಿಯಾಗಿ ಅಲ್ಲ, ಆ ನಿರ್ದಿಷ್ಟ ನಿಶ್ಯಬ್ದದ ಕ್ಷಣದಲ್ಲಿ ನಿಂತು ನೋಡಿದ ವೈದ್ಯನಾಗಿ ನಾನು ಒಂದು ಮಾತನ್ನು ಖಚಿತವಾಗಿ ಹೇಳಬಲ್ಲೆ.
ಆ ಕೊನೆಯ ಕ್ಷಣದಲ್ಲಿ, ಪ್ರತಿಯೊಬ್ಬರ ಮುಖದಲ್ಲಿ ಕಾಣುವ ಭಯವೂ ಒಂದೇ. ಮತ್ತು ಕೊನೆಗೂ ಆವರಿಸುವ ಆ ಶಾಂತಿಯೂ ಒಂದೇ. ಅವರವರು ಯಾವುದೇ ಹೆಸರಿನಿಂದ ಕರೆದಿರಬಹುದು, ಆದರೆ ಅವರೆಲ್ಲರೂ ತಲುಪಲು ಬಯಸಿದ್ದು ಒಂದೇ ಗುರಿಯನ್ನು.
…
ಆಗಸದಲ್ಲಿ ಬೆಳಕು ಮಾಸಿತ್ತು. ಸೂರ್ಯ ಮುಳುಗಿದ ತಕ್ಷಣ ಕಾಣುವ ಒಂದು ಮಸುಕಾದ ನೇರಳೆ ಬಣ್ಣ ಮಾತ್ರ ಉಳಿದಿತ್ತು. ಮಾಯಾ ತನ್ನ ತಲೆಯನ್ನು ಅಜ್ಜನ ತೋಳಿಗೆ ಒರಗಿಸಿಕೊಂಡು ಕುಳಿತಿದ್ದಳು.
“ಹಾಗಾದ್ರೆ,” ಅವಳು ಇನ್ನೂ ಯೋಚಿಸುತ್ತಲೇ ಮೆಲ್ಲಗೆ ಕೇಳಿದಳು. “ಜ಼ರಾ ಅರೇಬಿಕ್‌ನಲ್ಲಿ ಪ್ರಾರ್ಥನೆ ಮಾಡಿದಾಗ, ಜಾನ್ ಇಂಗ್ಲಿಷ್‌ನಲ್ಲಿ ಪ್ರಾರ್ಥಿಸಿದಾಗ, ಮತ್ತು ನಾನು ಸಂಸ್ಕೃತದಲ್ಲಿ ಶ್ಲೋಕ ಹೇಳಿದಾಗ… ದೇವರು ನಮ್ಮೆಲ್ಲರ ಮಾತನ್ನೂ ಕೇಳ್ತಾನಾ?”
ಅಜ್ಜ ಅವಳನ್ನು ಹತ್ತಿರಕ್ಕೆ ಎಳೆದುಕೊಂಡರು. “ಯಾವತ್ತಿಗೂ ಕೇಳ್ತಾನೆ ಚಿನ್ನು.”
ಅಜ್ಜ ಈಗ ಕಾಣಿಸುತ್ತಿದ್ದ ನಕ್ಷತ್ರಗಳನ್ನು ನೋಡುತ್ತಾ ಹೇಳಿದರು, “ದೇವರು ಬರೀ ಪದಗಳನ್ನು ಕೇಳಿಸಿಕೊಳ್ಳುವುದಿಲ್ಲ. ಆ ಪದಗಳ ಹಿಂದಿರುವ ಭಾವನೆಯನ್ನು ಕೇಳಿಸಿಕೊಳ್ಳುತ್ತಾನೆ. ಮತ್ತು ಪ್ರತಿಯೊಂದು ಪ್ರಾರ್ಥನೆಯ ಹಿಂದೆಯೂ, ಯಾವುದೇ ಭಾಷೆಯಿರಲಿ, ಅಲ್ಲಿರುವ ಭಾವನೆ ಒಂದೇ.”
ಮಾಯಾ ಕ್ಷಣಕಾಲ ಸುಮ್ಮನಿದ್ದಳು. ಆಮೇಲೆ, “ಸೂರ್ಯನ ಹಾಗೆ. ನೀವದನ್ನ ಏನಂತ ಕರೀತೀರಿ ಅನ್ನೋದು ಮುಖ್ಯ ಅಲ್ಲ. ಅದು ನಮ್ಮನ್ನ ಬೆಚ್ಚಗೆ ಇಡುತ್ತೆ, ಅಷ್ಟೇ.”
ಅಜ್ಜ ಬಹಳ ಹೊತ್ತು ಏನೂ ಮಾತನಾಡಲಿಲ್ಲ. ಅವಳನ್ನು ಹಾಗೆಯೇ ತಬ್ಬಿಕೊಂಡರು.
“ನಿಜ ಚಿನ್ನು,” ಕೊನೆಗೂ ಅಜ್ಜ ಉಸುರಿದರು, “ಅದು ನಮ್ಮನ್ನ ಬೆಚ್ಚಗಿಡುತ್ತೆ, ಅಷ್ಟೇ.”
…
- ಬ್ರಹ್ಮನ್ ಕುರಿತು ವಿಕಿಪೀಡಿಯಾ ಲೇಖನ (ಇಂಗ್ಲಿಷ್): https://en.wikipedia.org/wiki/Brahman ↩︎











ಪ್ರತಿಕ್ರಿಯೆ ಬರೆಯಿರಿ